ತಿರುವನಂತಪುರಂ: ನಡೆಯುತ್ತಿರುವ ರೈತರ ಪ್ರತಿಭಟನೆಯ ಮಧ್ಯೆ ವಿರೋಧ ಪಕ್ಷಗಳ ಮೇಲೆ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳಿಧರನ್ ಹರಿಹಾಯ್ದಿದ್ದಾರೆ. ದೇಶದ ಕೆಲವು ರಾಜಕೀಯ ಪಕ್ಷಗಳು "ರೈತರನ್ನು ನಕಲಿ ಅಪಪ್ರಚಾರದಿಂದ ದಾರಿ ತಪ್ಪಿಸಲು" ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ.
ನಡೆಯುತ್ತಿರುವ ಆಂದೋಲನದಲ್ಲಿ, ಕೃಷಿ ಕಾನೂನುಗಳ ಸೋಗಿನಲ್ಲಿ, ದೇಶದ ಹೊರಗಿನ ಕೆಲವು ಶಕ್ತಿಗಳ ಕೈವಾಡವಿದೆ ಎಂದು ಸಾಕಷ್ಟು ಮಾಹಿತಿಗಳು ಹೊರಬರುತ್ತಿವೆ. ಈ ಆಂದೋಲನ ಭಾರತದ ಪ್ರಗತಿ ತಡೆಯಲು ಮತ್ತು ದೇಶವನ್ನು ಕೆಣಕಲು ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದ ರಾಜಕೀಯ ಪಕ್ಷಗಳು ಅಂತಹ ಬಲೆಗೆ ಬೀಳದಂತೆ ನಾನು ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರಂತಹ ದೇಶದ ಶ್ರೇಷ್ಠ ರಾಷ್ಟ್ರೀಯತಾವಾದಿ ಆಟಗಾರರನ್ನು ಅವಮಾನಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ರಾಷ್ಟ್ರೀಯ ಐಡಲ್ಗಳನ್ನು ಅವಮಾನಿಸಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಆನ್ಲೈನ್ನಲ್ಲಿ ಗೋವರ್ಧನ ಬೆಟ್ಟದ ಕಲ್ಲು ಮಾರಾಟ: IndiaMART ಸಿಇಒ ಸೇರಿ ಮೂವರ ವಿರುದ್ಧ ಎಫ್ಐಆರ್
ಸಿಪಿಐ (ಎಂ) ನೇತೃತ್ವದ ಕೇರಳ ಸರ್ಕಾರ ಮಹಿಳೆಯರಿಗೆ ಶಬರಿಮಲೆಗೆ ಅವಕಾಶ ನೀಡುವ ನಿರ್ಧಾರ ಕೈಗೊಂಡಾಗ ಏನನ್ನೂ ಮಾಡದ ಕಾಂಗ್ರೆಸ್ ಪಕ್ಷ, ಅದನ್ನು "ರಾಜಕೀಯ ಲಾಭಕ್ಕಾಗಿ" ಬಳಸಿಕೊಳ್ಳುತ್ತಿದೆ. ಹಿಂದೂ ಸಂಘಟನೆಗಳಿಗೆ ಸೇರಿದ 55,000 ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ರಾಜ್ಯ ಸರ್ಕಾರದ ವಿರುದ್ಧ ನಿಂತಿರುವುದು ಭಾರತೀಯ ಜನತಾ ಪಕ್ಷ (ಬಿಜೆಪಿ) ಎಂದಿದ್ದಾರೆ.