ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದ ಉತ್ಖನನಕ್ಕೆ ಕೇಂದ್ರ ಸಂಸ್ಕೃತಿ ಸಚಿವಾಲಯ ಆದೇಶ ನೀಡಿದೆ ಎಂದು ವರದಿಯಾಗಿತ್ತು. ಈ ಕುರಿತಾಗಿ ಕೇಂದ್ರ ಸಚಿವ ಜಿ.ಕೆ.ರೆಡ್ಡಿ ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ರೀತಿಯ ನಿರ್ದೇಶನವನ್ನು ಕೇಂದ್ರ ಸರ್ಕಾರ ನೀಡಿಲ್ಲ ಎಂದು ತಿಳಿಸಿದ್ದಾರೆ.
ಕುತುಬ್ ಮಿನಾರ್ ವಿವಾದವೇನು?: ಕುತುಬ್ ಮಿನಾರ್ ವಿವಾದ ಸದ್ಯ ನಡೆಯುತ್ತಿರುವ ವಾರಣಾಸಿಯ ಜ್ಞಾನವಾಪಿ ಮಸೀದಿ ರೀತಿಯಲ್ಲೇ ಇದೆ. 'ಕುತುಬ್ ಮಿನಾರ್ ಅನ್ನು ಕುತ್ಬುದ್ದೀನ್ ಐಬಕ್ ಕಟ್ಟಿಸಿದ್ದಲ್ಲ. ಹಿಂದೂ ರಾಜ ವಿಕ್ರಮಾದಿತ್ಯ ಇದರ ನಿರ್ಮಾತೃ. ಸೂರ್ಯನ ದಿಕ್ಕು ಅರಿಯಲು ಅವರು ಇದನ್ನು ಕಟ್ಟಿಸಿದ್ದರು' ಎಂದು ಇತ್ತೀಚೆಗೆ ಭಾರತೀಯ ಪುರಾತತ್ವ ಇಲಾಖೆಯ ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಹೇಳಿದ್ದರು.
ಮೇ 21 ರಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಇತರೆ ಮೂವರು ಇತಿಹಾಸಜ್ಞರು, ನಾಲ್ವರು ಪುರಾತತ್ವ ಅಧಿಕಾರಿಗಳು ಹಾಗು ಸಂಶೋಧಕರೊಂದಿಗೆ ಕುತುಬ್ ಮಿನಾರ್‌ಗೆ ಭೇಟಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ 1991 ನಂತರದಲ್ಲಿ ಕುತುಬ್ ಮಿನಾರ್ ಕಾಂಪ್ಲೆಕ್ಸ್‌ನಲ್ಲಿ ಯಾವುದೇ ಉತ್ಖನನ ಕೆಲಸ ನಡೆದಿಲ್ಲ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿಗೆ ತಿಳಿಸಿದ್ದರು.
ಇದಕ್ಕೂ ಹಿಂದೆ, 'ಕುತುಬ್ ಮಿನಾರ್ ನಿಜವಾಗಿ ವಿಷ್ಣು ಸ್ತಂಭವಾಗಿತ್ತು. ನಂತರದಲ್ಲಿ ಈ ಕಾಂಪ್ಲೆಕ್ಸ್ ಅನ್ನು 27 ಹಿಂದೂ ಮತ್ತು ಜೈನ ಬಸದಿಗಳನ್ನು ನೆಲಸಮಗೊಳಿಸಿ ಕಟ್ಟಲಾಗಿದೆ' ಎಂದು ವಿಶ್ವ ಹಿಂದೂ ಪರಿಷತ್ ವಕ್ತಾರ ವಿನೋದ್ ಬನ್ಸಲ್ ಹೇಳಿದ್ದರು.
ಇದನ್ನೂ ಓದಿ: ಕ್ವಾಡ್ ಶೃಂಗಸಭೆ: ಟೋಕಿಯೋದಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ