ಲಖನೌ, ಉತ್ತರಪ್ರದೇಶ: ನಗರದಲ್ಲಿ ನಡೆದ ಶೂಟೌಟ್ ಪ್ರಕರಣ ಸಂಚಲನ ಮೂಡಿಸುತ್ತಿದೆ. ಕೇಂದ್ರ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರ ಮನೆಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮೃತಪಟ್ಟ ಯುವಕ ಸಚಿವರ ಮಗನ ಸ್ನೇಹಿತನಾಗಿದ್ದಾನೆ ಎಂದು ತಿಳಿದು ಬಂದಿದೆ. ಸಚಿವರ ಪುತ್ರನ ಪಿಸ್ತೂಲ್‌ನಿಂದ ಹಾರಿದ ಬುಲೆಟ್‌ನಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಹಲವು ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಫೋರೆನ್ಸಿಕ್ ತಂಡವೂ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ.
ಮಾಹಿತಿ ಪ್ರಕಾರ, ಠಾಕೂರ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗಾರಿಯಾ ಗ್ರಾಮದಲ್ಲಿರುವ ಕೇಂದ್ರ ಸಚಿವರ ಎರಡನೇ ನಿವಾಸದಲ್ಲಿ ಈ ಘಟನೆ ನಡೆದಿದೆ. ಕೇಂದ್ರ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರ ಮನೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ತಲೆಗೆ ಗುಂಡು ತಗುಲಿ ಯುವಕ ಸಾವನ್ನಪ್ಪಿದ್ದಾನೆ. ಇದೇ ವೇಳೆ ಯುವಕ ಸಚಿವರ ಪುತ್ರನ ಸ್ನೇಹಿತನಾಗಿದ್ದ ಎನ್ನಲಾಗಿದೆ.
ಸಚಿವರ ಪುತ್ರನ ಪಿಸ್ತೂಲ್‌ನಿಂದ ಹಾರಿದ ಬುಲೆಟ್‌ನಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಮಾಹಿತಿ ಪಡೆದ ಪಶ್ಚಿಮ ಡಿಸಿಪಿ ರಾಹುಲ್ ರಾಜ್, ಎಡಿಸಿಪಿ ಚಿರಂಜೀವಿ ನಾಥ್ ಸಿನ್ಹಾ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಪ್ರಕರಣದಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಫೋರೆನ್ಸಿಕ್ ತಂಡವು ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸುತ್ತಿದೆ.
ಮೂಲಗಳ ಪ್ರಕಾರ, ಸಚಿವ ಕೌಶಲ್ ಕಿಶೋರ್ ಪುತ್ರ ವಿಕಾಸ್ ಕಿಶೋರ್ ಅವರ ಸ್ನೇಹಿತ ವಿನಯ್ ಶ್ರೀವಾಸ್ತವ್ ಅವರು ಸಚಿವರ ನಿವಾಸಕ್ಕೆ ಬಂದಿದ್ದರು. ಮುಂಜಾನೆ ನಾಲ್ಕು ಗಂಟೆಗೆ ತಲೆಗೆ ಗುಂಡು ತಗುಲಿ ವಿನಯ್ ಶ್ರೀವಾಸ್ತವ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ. ವಿಕಾಸ್ ಕಿಶೋರ್ ಅವರ ಪಿಸ್ತೂಲ್‌ನಿಂದ ಗುಂಡು ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆಯಲ್ಲಿ ನಿರತರಾಗಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗದ ಡಿಸಿಪಿ ರಾಹುಲ್ ರಾಜ್ ಮಾತನಾಡಿ, ವಿನಯ್ ಶ್ರೀವಾಸ್ತವ್ ಮೇಲೆ ಗುಂಡು ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ. ತಲೆಯ ಮೇಲೆ ಗಾಯದ ಗುರುತು ಇದೆ. ರಾತ್ರಿ ಮನೆಗೆ ಸಾಕಷ್ಟು ಜನ ಬಂದಿದ್ದರು. ತಿಂದ ನಂತರ ಗುಂಡು ಹಾರಿಸಲಾಯಿತು. ಸ್ಥಳದಿಂದ ಪಿಸ್ತೂಲ್ ಕೂಡ ಪತ್ತೆಯಾಗಿದೆ. ಪಿಸ್ತೂಲ್ ವಿಕಾಸ್ ಕಿಶೋರ್ ಅವರದ್ದು ಎನ್ನಲಾಗಿದೆ. ತನಿಖೆ ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಗುಂಡು ಹಾರಿಸಿದವರು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಫೋರೆನ್ಸಿಕ್ ತಂಡವನ್ನು ತನಿಖೆಗೆ ನಿಯೋಜಿಸಲಾಗಿದೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಕೇಂದ್ರ ಸಚಿವರು ಹೇಳಿದ್ದೇನು?: ನನ್ನ ಮಗ ಆಶು ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲ. ಆತ ದೆಹಲಿಗೆ ಹೋಗಿದ್ದ. ನಾನೇ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ನ್ಯಾಯಯುತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದೇನೆ. ತಪ್ಪಿತಸ್ಥರು ಮತ್ತು ಕೊಲೆಗಾರರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ. ಮೃತರು ಮತ್ತು ಆತನ ಕುಟುಂಬದವರು ನನಗೆ ತುಂಬಾ ಆತ್ಮೀಯರು. ಈ ದುಃಖದ ಸಮಯದಲ್ಲಿ ನಾನು ಅವರೊಂದಿಗಿದ್ದೇನೆ. ಈಗ ಇದರಲ್ಲಿ ಭಾಗಿಯಾದವರು ಯಾರು ಎಂದು ಪೊಲೀಸರ ತನಿಖೆ ಮೂಲಕ ಬಯಲಾಗಬೇಕು ಎಂದು ಕೇಂದ್ರ ಸಚಿವ ಕೌಶಲ್ ಕಿಶೋರ್ ಹೇಳಿದ್ದಾರೆ.
ಓದಿ: ಖಾಸಗಿ ಬಸ್ಗಳ ಫುಟ್ ಬೋರ್ಡ್ನಲ್ಲಿ ಪ್ರಯಾಣ: ಮಂಗಳೂರು ನಗರ ಸಂಚಾರ ಪೊಲೀಸರಿಂದ 123 ಪ್ರಕರಣ ದಾಖಲು