ಎಬೋಲಾ, ಜಿಕಾ, ನಿಪಾ, ಮರ್ಸ್ ಮತ್ತು ಸಾರ್ಸ್ ಮಾದರಿಯಲ್ಲಿ ಅಪಾಯಕಾರಿ ರೋಗಕಾರಕವೊಂದು ಜಗತ್ತನ್ನು ಕಾಡಲು ಮುಂದಾಗಿದ್ದು, ರೋಗದ ಮೂಲ ಕಾರಣ ಕಂಡುಕೊಳ್ಳಲು ಯತ್ನಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು 2019 ರಲ್ಲಿಯೇ ಎಚ್ಚರಿಸಿತ್ತು. ಈ ಭವಿಷ್ಯವಾಣಿಯನ್ನು ನಿಜ ಎಂದು ಸಾಬೀತುಪಡಿಸುವ ರೀತಿ ಕೋವಿಡ್-19 ಸಾಂಕ್ರಾಮಿಕವು ಅಪ್ಪಳಿಸಿದ್ದು, ಜಗತ್ತಿನಾದ್ಯಂತ ಸಾಮಾಜಿಕ-ಆರ್ಥಿಕ ವಿನಾಶ ಉಂಟುಮಾಡಿದೆ.
ಕೋವಿಡ್-19 ನಿಂದಾಗಿ ಇದುವರೆಗೆ 23.22 ಲಕ್ಷ ಸಾವು ಸಂಭವಿಸಿವೆ. ಭಾರತದಲ್ಲಿ 1.08 ಕೋಟಿ ಜನರಿಗೆ ಸೋಂಕು ತಗುಲಿದ್ದು,1.55 ಲಕ್ಷ ಜನರ ಸಾವಿಗೆ ಕಾರಣವಾದ ಈ ಸಾಂಕ್ರಾಮಿಕ ಈಗ ಹಿಮ್ಮೆಟ್ಟುವ ಲಕ್ಷಣಗಳು ಕಂಡುಬಂದಿವೆ. ಮರಣ ಪ್ರಮಾಣ ಈಗ ತೀರಾ ಕೆಳಮಟ್ಟ ತಲುಪಿದ್ದರೂ, ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಮಾತ್ರ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನವನ್ನು ತೀವ್ರಗೊಳಿಸುವ ಸಾಧ್ಯತೆಯ ಬಗ್ಗೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಮೊದಲ ಹಂತದಲ್ಲಿ, ಲಸಿಕೆ ವಿತರಣೆಯನ್ನು ಕೇಂದ್ರ ಸರ್ಕಾರವು ಕೇವಲ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿಯ ಯೋಧರಿಗೆ ಮಾತ್ರ ಸೀಮಿತಗೊಳಿಸಿತ್ತು. ಶೇಕಡಾ 55 ರಷ್ಟು ಆರೋಗ್ಯ ಕಾರ್ಯಕರ್ತರು ಮತ್ತು ಶೇಕಡಾ 4.5 ರಷ್ಟು ಪೊಲೀಸ್ ಮತ್ತು ನೈರ್ಮಲ್ಯ ಕಾರ್ಯಕರ್ತರು ಮಾತ್ರ ಲಸಿಕೆ ಪಡೆಯಲು ಮುಂದಾದರು. ಜಾಗತಿಕ ಆರೋಗ್ಯವು ಎದುರಿಸುತ್ತಿರುವ ಹತ್ತು ದೊಡ್ಡ ಸವಾಲುಗಳಲ್ಲಿ ಲಸಿಕೆ ಹಿಂಜರಿಕೆ ಕೂಡಾ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಲಸಿಕೆಗೆ ಸಂಬಂಧಿಸಿದ ಎಲ್ಲಾ ರೀತಿಯ ಹಿಂಜರಿಕೆಯನ್ನು ನಿವಾರಿಸುವಂತಹ ಪ್ರಬಲ ಕ್ರಿಯಾ ಯೋಜನೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಬೇಕು. ಏಕೆಂದರೆ ಎಲ್ಲರೂ ಸುರಕ್ಷಿತವಾಗಿರುವವರೆಗೂ ಯಾರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಈಗಿರುವ ಲಸಿಕೆಗಳಲ್ಲದೆ ಇನ್ನೂ ಏಳು ಲಸಿಕೆಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಹೇಳುತ್ತಿದೆ. ಮುಂದಿನ ತಿಂಗಳಿನಿಂದ 50 ವರ್ಷ ದಾಟಿದವರಿಗೂ ಲಸಿಕೆ ನೀಡುವುದಕ್ಕೆ ಸರ್ಕಾರ ಮುಂದಾಗಿದೆ. ಕೇಂದ್ರ ಹಣಕಾಸು ಸಚಿವರು ಲಸಿಕೆಗೆಂದೇ ಬಜೆಟ್‌ನಲ್ಲಿ ರೂ. 35,000 ಕೋಟಿ ತೆಗೆದಿರಿಸಿದ್ದಾರೆ. ಹೀಗೆ ಮೀಸಲಿಟ್ಟ ಹಣದಲ್ಲಿ 50 ಕೋಟಿ ಜನರಿಗೆ ಲಸಿಕೆ ನೀಡಬಹುದು ಎಂದು ಸಂಬಂಧಪಟ್ಟ ಸಚಿವಾಲಯದ ಕಾರ್ಯದರ್ಶಿಗಳು ತಿಳಿಸಿದ್ದಾರೆ. 56 ಲಕ್ಷ ಲಸಿಕೆ ಡೋಸ್‌ಗಳನ್ನು 17 ದೇಶಗಳಿಗೆ ರಫ್ತು ಮಾಡುವ ಮೂಲಕ ಭಾರತ ತನ್ನ ಉದಾರತೆಯನ್ನು ಪ್ರದರ್ಶಿಸಿದೆ. ಲಸಿಕೆಗಳ ತಯಾರಿಕೆಯಲ್ಲಿ ನಾವು ಸ್ವಾವಲಂಬನೆ ಸಾಧಿಸಿರುವುದು ನಿಜಕ್ಕೂ ಅದೃಷ್ಟವೇ.
ಒಂದೇ ಸಮಯದಲ್ಲಿ ದೇಶದ 138 ಕೋಟಿ ಜನರಿಗೆ ಸಂಪೂರ್ಣವಾಗಿ ಲಸಿಕೆ ನೀಡುವುದು ಅಸಾಧ್ಯ. ಹೀಗಾಗಿ ಕೇಂದ್ರ ಸರ್ಕಾರವು ಲಸಿಕೆ ಅಭಿಯಾನವನ್ನು ಹಂತ ಹಂತವಾಗಿ ಯೋಜಿಸಿದೆ. ಲಸಿಕೆಯ ಮೊದಲ ಹಂತದ ಫಲಾನುಭವಿಗಳು ತೋರಿಸಿದ ಹಿಂಜರಿಕೆಯಿಂದಾಗಿ ತಯಾರಕರ ಹತ್ತಿರ ಲಸಿಕೆಯ ಭಾರಿ ದಾಸ್ತಾನೇ ಸೃಷ್ಟಿಯಾಗುತ್ತಿದೆ. ಇನ್ನೊಂದೆಡೆ, ಲಸಿಕೆಗಾಗಿ ಹಂಬಲಿಸುತ್ತಿರುವ ಲಕ್ಷಾಂತರ ಜನ ಅದನ್ನು ಪಡೆಯಲು ಸಾಧ್ಯವಾಗದ ಪರಿಸ್ಥಿತಿಗೆ ಇದು ಕಾರಣವಾಗುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರವು ಸಂಪೂರ್ಣ ಸಾಮರ್ಥ್ಯದ ಲಸಿಕೆ ಉತ್ಪಾದನೆಯನ್ನು ಪ್ರೋತ್ಸಾಹಿಸಬೇಕು ಹಾಗೂ ಈ ಅಭಿಯಾನದಲ್ಲಿ ಖಾಸಗಿ ಆಸ್ಪತ್ರೆಗಳು ಸಹ ಒಳಗೊಂಡಿರಬೇಕು. ಕೋವಿಡ್ ಲಸಿಕೆ ಪ್ರತಿಯೊಬ್ಬ ನಾಗರಿಕರಿಗೂ ಲಭ್ಯವಾಗುವಂತೆ ಮಾಡಬೇಕು.
ಸರ್ಕಾರದ ಲಸಿಕೆ ಅಭಿಯಾನದ ಅಂದಾಜು ಶೇಕಡಾ 85 ರಷ್ಟು ಪ್ರಮಾಣವು ಕೇವಲ 12 ರಾಜ್ಯಗಳಲ್ಲಿ ಮಾತ್ರ ಕೇಂದ್ರೀಕೃತವಾಗಿದೆ. ಉಳಿದ ರಾಜ್ಯಗಳಲ್ಲಿ ಇದೇಕೆ ಮಂದವಾಗಿದೆ ಎಂಬುದರ ಕಾರಣಗಳನ್ನು ಸರ್ಕಾರ ಪರಿಶೀಲಿಸಬೇಕು. ಲಸಿಕೆಯು ಕಾಳಸಂತೆಯತ್ತ ಹೊರಳುವುದನ್ನು ತಡೆಯಲು ಕಠಿಣ ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕು. ಜಿಪಿಎಸ್ ಸಹಾಯದಿಂದ ಲಸಿಕೆ ಸಾಗಣೆಯ ಜಾಡಿನ ಮೇಲೆ ನಿಗಾ ಇಡಬೇಕು. ಲಸಿಕೆ ಅಭಿಯಾನ ಯಶಸ್ವಿಯಾಗಲು ಕೇಂದ್ರ ಮತ್ತು ರಾಜ್ಯಗಳು ಸಮರೋಪಾದಿಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಕೋವಿಡ್-19 ಲಸಿಕೆಗಳಿಗೆ ಸಂಬಂಧಿಸಿದಂತೆ ಜನರ ಹಿಂಜರಿಕೆಯನ್ನು ಹಿಮ್ಮೆಟ್ಟಿಸುವ ರೀತಿ ಪ್ರಚಾರವನ್ನು ಸಂಪೂರ್ಣವಾಗಿ ವಿನ್ಯಾಸಗೊಳಿಸಬೇಕು ಮತ್ತು ಅಭಿವೃದ್ಧಿಪಡಿಸಬೇಕು. ಲಸಿಕೆ ಪಡೆಯಲು ಜನಸಾಮಾನ್ಯರು ದೊಡ್ಡ ಸಂಖ್ಯೆಯಲ್ಲಿ ಬಂದಾಗ ಮಾತ್ರ ದೇಶವು ಈ ಸಾಂಕ್ರಾಮಿಕ ರೋಗದ ವಿರುದ್ಧ ಜಯಶಾಲಿಯಾಗಿ ಹೊರಹೊಮ್ಮಬಹುದು. ಅಂತಹ ಸಾಮೂಹಿಕ ಪಾಲ್ಗೊಳ್ಳುವಿಕೆ ಮಾತ್ರ ಲಸಿಕೆ ಕುರಿತು ಇತರರಲ್ಲಿರುವ ಹಿಂಜರಿಕೆಯನ್ನು ದೂರ ಮಾಡಬಲ್ಲದು.