ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಜುಲೈ 8ರಂದು ಪುನರ್ ರಚನೆಯಾಗುವುದು ಬಹುತೇಕ ಖಚಿತವಾಗಿದೆ. ಎನ್‌ಡಿಎ ಸರ್ಕಾರದಲ್ಲಿ ಈ ಸಲ ಕೆಲವೊಂದು ಹೊಸ ಯುವ ಮುಖಗಳಿಗೆ ಸಚಿವ ಸ್ಥಾನ ಸಿಗುವುದು ಕನ್ಫರ್ಮ್ ಆಗಿದೆ. ಹೀಗಾಗಿ ವಿವಿಧ ರಾಜ್ಯಗಳಿಂದ ಕೆಲವರು ದೆಹಲಿಯತ್ತ ಈಗಾಗಲೇ ಪ್ರಯಾಣ ಬೆಳೆಸಿದ್ದಾರೆ.
ಪ್ರಮುಖವಾಗಿ 2022ರಲ್ಲಿ ಐದು ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದನ್ನು ಗಮನದಲ್ಲಿಟ್ಟುಕೊಂಡೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಈಗಾಗಲೇ ಕರ್ನಾಟಕದಿಂದ ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಹಾಗೂ ರಮೇಶ್ ಜಿಗಜಿಣಗಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಲಾಗಿದೆ. ಹೀಗಾಗಿ ಇವರಿಗೂ ಕೇಂದ್ರ ಕ್ಯಾಬಿನೆಟ್ನಲ್ಲಿ ಸಚಿವ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿರಿ: ಚಾಣಾಕ್ಷ ಆಟಗಾರ ಧೋನಿ... ಮಹತ್ವದ ಟೂರ್ನಿಗಳಲ್ಲಿ ಇವರ ನಿರ್ಧಾರವೇ ಪ್ರಶಸ್ತಿ ಗೆಲುವಿಗೆ ಕಾರಣ!
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸಭೆ ನಡೆಸಿ ಸಂಪುಟ ಸೇರುವ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಮೋದಿ ಕ್ಯಾಬಿನೆಟ್ನಲ್ಲಿ 53 ಮಂದಿ ಸಚಿವರಿದ್ದು, ಇನ್ನೂ 28 ಮಂದಿಯನ್ನ ಸಂಪುಟಕ್ಕೆ ಸೇರಿಸಿಕೊಳ್ಳಲು ಅವಕಾಶವಿದೆ. ಹಾಗಾದರೆ ಇವರಿಗೆಲ್ಲ ಸಚಿವ ಸ್ಥಾನ ಸಿಗಬಹುದು ಎಂದೇ ಹೇಳಲಾಗುತ್ತಿದೆ.
- ಜ್ಯೋತಿರಾದಿತ್ಯ ಸಿಂಧಿಯಾ(ಮಧ್ಯಪ್ರದೇಶ)
- ನಾರಾಯಣ್ ರಾಣೆ(ಮಹಾರಾಷ್ಟ್ರ)
- ಸರ್ಭಾನಂದ್ ಸೋನಾವಾಲ್(ಅಸ್ಸೋಂ) ಈ ಮೂವರ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದ್ದು, ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಉಳಿದಂತೆ ವರುಣ್ ಗಾಂಧಿ, ಆರ್ಸಿಪಿ ಸಿಂಗ್, ಲಲನ್ ಸಿಂಗ್, ಸಿಪಿ ಜೋಶಿ,ಪಂಕಜ್ ಚೌಧರಿ, ಅನುಪ್ರಿಯಾ ಪಟೇಲ್, ಸುಶೀಲ್ ಮೋದಿ, ಸಂತೋಷ್ ಕುಸ್ವಾ ಹೆಸರು ಕೇಳಿ ಬರುತ್ತಿವೆ. ಕೆಲವೊಂದು ಮೂಲಗಳ ಪ್ರಕಾರ ಕೇವಲ 6 ಮಂದಿಗೆ ಸಚಿವ ಸ್ಥಾನ ಸಿಗಲಿದೆ ಎನ್ನಲಾಗ್ತಿದೆ. ಮತ್ತೊಂದು ಮೂಲದ ಪ್ರಕಾರ 20 ಮುಂದಿಗೆ ನಮೋ ಕ್ಯಾಬಿನೆಟ್ನಲ್ಲಿ ಸ್ಥಾನ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.