ನವದೆಹಲಿ : ಖಾದ್ಯ ತೈಲ ಆಮದಿನ ಮೇಲೆ ದೇಶದ ಅವಲಂಬನೆ ಕಡಿಮೆ ಮಾಡುವ ಪ್ರಯತ್ನದಲ್ಲಿ ಕೇಂದ್ರ ಕ್ಯಾಬಿನೆಟ್ ಖಾದ್ಯ ತೈಲಗಳು ಮತ್ತು ಪಾಮ್ ಆಯಿಲ್ ಉತ್ಪಾದನೆ ಹೆಚ್ಚಿಸುವ ರಾಷ್ಟ್ರೀಯ ಮಿಷನ್ಗೆ ಅನುಮೋದಿಸಿದೆ.
ಬುಧವಾರ ಈ ಬಗ್ಗೆ ಪ್ರಕಟಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಉದ್ದೇಶಿತ ರಾಷ್ಟ್ರೀಯ ಖಾದ್ಯ ತೈಲ ಮಿಷನ್(NMEO-OP)ಅಡಿ ಪಾಮ್ ಆಯಿಲ್ನ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ 11,040 ಕೋಟಿ ಹೂಡಿಕೆ ಮಾಡಲಿದೆ ಎಂದು ಹೇಳಿದರು.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುತ್ತಾ, ತಾಳೆ ಮತ್ತು ಇತರ ಎಣ್ಣೆ ಬೀಜಗಳ ಕೃಷಿ ಉತ್ತೇಜಿಸಲು ಗುಣಮಟ್ಟದ ಬೀಜಗಳಿಂದ ತಂತ್ರಜ್ಞಾನದವರೆಗೆ ರೈತರಿಗೆ ಎಲ್ಲಾ ಸೌಲಭ್ಯಗಳನ್ನು ಪಡೆಯುವುದನ್ನು ಖಾತ್ರಿಪಡಿಸುವುದಾಗಿ ಹೇಳಿದರು. ಸಚಿವರ ಪ್ರಕಾರ, 2030ರ ವೇಳೆಗೆ ಖಾದ್ಯ ತೈಲ ಕೃಷಿಯ ವಿಸ್ತೀರ್ಣವನ್ನು ಈಗಿರುವ 3.5 ಲಕ್ಷ ಹೆಕ್ಟೇರ್‌ನಿಂದ 28 ಲಕ್ಷ ಟನ್‌ಗೆ ಹೆಚ್ಚಿಸಲು ಈ ಯೋಜನೆ ಸಹಾಯ ಮಾಡುತ್ತದೆ.
ಸರ್ಕಾರದ ಪ್ರಮುಖ ಯೋಜನೆ PM-KISAN ಅಡಿಯಲ್ಲಿ 9.75 ಕೋಟಿ ಫಲಾನುಭವಿ ರೈತರಿಗೆ ಒಂಬತ್ತನೇ ಕಂತಿನ 19,500 ಕೋಟಿ ಬಿಡುಗಡೆ ಮಾಡಿದ ನಂತರ, ಈ ತಿಂಗಳ ಆರಂಭದಲ್ಲಿ ಈ ಮಿಷನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದರು.
"ಭಾರತವು ಅಕ್ಕಿ, ಗೋಧಿ ಮತ್ತು ಸಕ್ಕರೆಯ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ ಅಥವಾ 'ಆತ್ಮನಿರ್ಭರ್' ಆಗಿದೆ. ಆದರೆ, ದೇಶವು ಖಾದ್ಯ ತೈಲಗಳ ಬೃಹತ್ ಆಮದುಗಳ ಮೇಲೆ ಅವಲಂಬಿತವಾಗಿರುವುದರಿಂದ ಅದು ಸಾಕಾಗಲಿಲ್ಲ" ಎಂದು ಮೋದಿ ಆಗಸ್ಟ್ 9ರಂದು ಹೇಳಿದ್ದರು.
ದ್ವಿದಳ ಧಾನ್ಯಗಳ ಉತ್ಪಾದನೆ ಕಳೆದ ಆರು ವರ್ಷಗಳಲ್ಲಿ ಶೇ.50ರಷ್ಟು ಹೆಚ್ಚಾಗಿದೆ ಎಂದು ಠಾಕೂರ್ ಹೇಳಿದರು. "ನಾವು ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಗೋಧಿ ಮತ್ತು ಭತ್ತದ ಉತ್ಪಾದನೆಯನ್ನು ಹೆಚ್ಚಿಸಲು ಮಾಡಿದ ಕೆಲಸಗಳನ್ನೇ, ಪ್ರಯತ್ನಗಳನ್ನೇ ದೇಶೀಯ ಖಾದ್ಯ ಎಣ್ಣೆಗಳ ಉತ್ಪಾದನೆ ಹೆಚ್ಚಿಸಲು ಮಾಡಬೇಕಾಗಿದೆ" ಎಂದು ಅವರು ಹೇಳಿದರು. ಆಕ್ರಮಣಕಾರಿ ಪ್ರಯತ್ನದಿಂದ ಖಾದ್ಯ ಎಣ್ಣೆಯಲ್ಲಿ ಸ್ವಾವಲಂಬಿಯನ್ನಾಗಿಸಲು ಸಮಯದ ಅಗತ್ಯವಿದೆ ಎಂದು ಹೇಳಿದ್ರು.
NERAMACಗಾಗಿ ಪುನಶ್ಚೇತನ ಪ್ಯಾಕೇಜ್ : ಪ್ರಧಾನಮಂತ್ರಿಗಳ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಕಮಿಟಿ (ಸಿಸಿಇಎ) ಸರ್ಕಾರಿ ಈಶಾನ್ಯ ಪ್ರಾದೇಶಿಕ ಕೃಷಿ ಮಾರುಕಟ್ಟೆ ನಿಗಮದ ಪುನರುಜ್ಜೀವನಕ್ಕಾಗಿ ರೂ.77.45 ಕೋಟಿ ಪ್ಯಾಕೇಜ್ ಅನ್ನು ಅನುಮೋದಿಸಿದೆ.
ಈಶಾನ್ಯ ಪ್ರಾದೇಶಿಕ ಕೃಷಿ ಮಾರುಕಟ್ಟೆ ನಿಗಮ (NERAMAC) ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ (MDoNER) ಆಡಳಿತಾತ್ಮಕ ನಿಯಂತ್ರಣದ ಒಂದು ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿದೆ. ಸರ್ಕಾರದ ಪ್ರಕಾರ, ಪುನಶ್ಚೇತನ ಪ್ಯಾಕೇಜ್ ರೈತರಿಗೆ ಸಾವಯವ ಬೀಜಗಳನ್ನು ಒದಗಿಸಲು NERAMACಗೆ ಸಹಾಯ ಮಾಡುತ್ತದೆ ಮತ್ತು ವಿಶ್ವ ಮಾರುಕಟ್ಟೆಯಲ್ಲಿ ಈಶಾನ್ಯ ಉತ್ಪನ್ನಗಳನ್ನು ಉತ್ತೇಜಿಸಲು ಕೊಯ್ಲಿನ ನಂತರದ ಸೌಲಭ್ಯಗಳನ್ನು ನೀಡುತ್ತದೆ.