ನವದೆಹಲಿ : ದೆಹಲಿಯಲ್ಲಿ ನಾಗರಿಕ ಸೇವೆಗಳ ಮೇಲಿನ ನಿಯಂತ್ರಣದ ಕುರಿತು ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಬದಲಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಮಸೂದೆಯನ್ನು ಅನುಮೋದಿಸಲಾಯಿತು. ಈ ಸುಗ್ರೀವಾಜ್ಞೆಯ ಬದಲಾಗಿ ಸಂಸತ್ತಿನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಸಂಸತ್ ಅಧಿವೇಶನ ಇಲ್ಲದಿರುವಾಗ ಕೇಂದ್ರ ಸಚಿವ ಸಂಪುಟದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಮಸೂದೆಗೆ ಅಂಗೀಕಾರ ನೀಡಬಹುದು.
ಕೇಂದ್ರ vs ದೆಹಲಿ ಸರ್ಕಾರ: ಈ ಹಿಂದೆ ದೆಹಲಿ ಸರ್ಕಾರವು ನಾಗರಿಕ ಸೇವೆಗಳ ಕುರಿತು ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಅರ್ಜಿಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ, ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಅರ್ಜಿ ವಿಚಾರಣೆ ನಡೆಸಿತ್ತು. ಈ ಹಿಂದಿನ ವಿಚಾರಣೆಯಲ್ಲಿ ದೆಹಲಿಯಲ್ಲಿ ನಾಗರಿಕ ಸೇವೆಗಳ ಮೇಲಿನ ನಿಯಂತ್ರಣದ ಸುಗ್ರೀವಾಜ್ಞೆ ಕುರಿತು ಮಧ್ಯಂತರ ತಡೆಯಾಜ್ಞೆ ನೀಡಲು ಕೋರ್ಟ್ ನಿರಾಕರಿಸಿತ್ತು. ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ಗೆ ನೋಟಿಸ್ ಜಾರಿ ಮಾಡಲಾಗಿತ್ತು.
ಕಳೆದ ಮೇ ತಿಂಗಳಲ್ಲಿ ದೆಹಲಿಯಲ್ಲಿ ಐಎಎಸ್ ಮತ್ತು ಕೇಡರ್ ಅಧಿಕಾರಿಗಳ ವರ್ಗಾವಣೆ ಮತ್ತು ಶಿಸ್ತು ಕ್ರಮಗಳಿಗಾಗಿ ಕೇಂದ್ರ ಸರ್ಕಾರವು ನಾಗರಿಕ ಸೇವಾ ಪ್ರಾಧಿಕಾರ ರಚಿಸಲು ಸುಗ್ರೀವಾಜ್ಞೆ ಹೊರಡಿಸಿತ್ತು. ಸುಪ್ರೀಂ ಕೋರ್ಟ್, ದೆಹಲಿಯಲ್ಲಿನ ಚುನಾಯಿತ ಸರ್ಕಾರಕ್ಕೆ ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭೂಮಿಗೆ ಸಂಬಂಧಿಸಿದ ಸೇವೆಗಳನ್ನು ಹೊರತುಪಡಿಸಿ ಇತರ ಸೇವೆಗಳ ನಿಯಂತ್ರಣವನ್ನು ಹಸ್ತಾಂತರಿಸಿದ ಒಂದು ವಾರದ ನಂತರ ಕೇಂದ್ರ ಈ ಸುಗ್ರೀವಾಜ್ಞೆ ಹೊರಡಿಸಿದೆ. ಈ ಬಗ್ಗೆ ಕಿಡಿಕಾರಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದು ದೆಹಲಿ ಸರ್ಕಾರದ ಅಧಿಕಾರವನ್ನು ದುರ್ಬಲಗೊಳಿಸುವ ಕ್ರಮ ಎಂದು ಟೀಕಿಸಿದ್ದರು. ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯನ್ನು ವಂಚನೆ ಎಂದು ಕಟುವಾಗಿ ಟೀಕಿಸಿದ್ದರು.
ಸುಗ್ರೀವಾಜ್ಞೆಗೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕಾರ ಪಡೆಯದಂತೆ ತಡೆಯಲು ಆಮ್ ಆದ್ಮಿ ಪಕ್ಷವು ಇತರ ಪಕ್ಷಗಳ ನೆರವು ಕೋರಿತ್ತು. ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದವು. ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಬಿಜೆಪಿ ಬೆಂಬಲಿತ ಸರ್ಕಾರ ಇಲ್ಲದ ರಾಜ್ಯಗಳಿಗೆ ತೆರಳಿ, ಪಕ್ಷಗಳ ರಾಜಕೀಯ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದರು.
ಈ ಬಗ್ಗೆ ವಾಗ್ದಾಳಿ ನಡೆಸಿದ ಆಪ್ ಸಚಿವ ಸೌರಭ್ ಭಾರದ್ವಾಜ್, ಕೇಜ್ರಿವಾಲ್ ಅವರನ್ನು ಮೂರು ಬಾರಿ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ ದೆಹಲಿಯ ಜನರು ಮತ್ತು ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ಮಾಡಿದ ಮೋಸ ಇದಾಗಿದೆ. ನ್ಯಾಯಾಂಗ ನಿಂದನೆ ಎಂದೂ ಟೀಕಿಸಿದ್ದರು.
ಇದನ್ನೂ ಓದಿ : Delhi ordinance row: ದೆಹಲಿ ಸುಗ್ರೀವಾಜ್ಞೆ ಕುರಿತ ಅರ್ಜಿ ವಿಚಾರಣೆ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್