ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರ್ ರಚನೆಯಾಗಿದ್ದು,43 ಸಂಸದರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇವರಿಗೆ ವಿವಿಧ ಇಲಾಖೆಯಲ್ಲಿ ಮಂತ್ರಿಸ್ಥಾನ ಸಹ ಹಂಚಿಕೆ ಮಾಡಲಾಗಿದೆ. ಇದೀಗ ಬಹಿರಂಗಗೊಂಡಿರುವ ಎಡಿಆರ್ ವರದಿ ಪ್ರಕಾರ ಕೇಂದ್ರ ಸಂಪುಟದಲ್ಲಿ ಶೇ. 90ರಷ್ಟು ಸಚಿವರು ಕೋಟ್ಯಾಧಿಪತಿಗಳು ಎಂಬುದು ತಿಳಿದು ಬಂದಿದೆ.
ಕೇಂದ್ರ ಸಂಪುಟದ 78 ಸಚಿವರ ಪೈಕಿ 33 ಮಂತ್ರಿಗಳು (ಶೇ.42ರಷ್ಟು) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಘೋಷಣೆ ಮಾಡಿದ್ದಾರೆ. ಇದರಲ್ಲಿ ನಾಲ್ವರ ವಿರುದ್ಧ ಕೊಲೆ ಯತ್ನ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ಮಾಡಿದೆ.
ಕೇಂದ್ರ ಸಂಪುಟ ಪುನರ್ರಚನೆಗೊಂಡ ವೇಳೆ ಪ್ರಮಾಣ ವಚನ ಸ್ವೀಕಾರ ಮಾಡಿ ಸಚಿವರಾಗಿರುವ 35 ವರ್ಷದ ನಿಸಿತ್ ಪ್ರಮಾಣಿಕ್ ಕೊಲೆ ಯತ್ನ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುವುದಾಗಿ ಘೋಷಣೆ ಮಾಡಿದ್ದಾರೆ. ಉಳಿದಂತೆ ಜಾನ್ ಬರ್ಲಾ, ಪಂಕಜ್ ಚೌಧರಿ ಹಾಗೂ ವಿ. ಮುರಳೀಧರನ್ ವಿರುದ್ಧ ಕೂಡ ಕೊಲೆ ಯತ್ನ ಪ್ರಕರಣಗಳಿವೆ ಎಂದು ಎಡಿಆರ್ ವರದಿ ಮಾಡಿದೆ.
ಇದನ್ನೂ ಓದಿರಿ: Amul ಬೆನ್ನಲ್ಲೇ Mother Dairy ಹಾಲಿನ ಬೆಲೆಯಲ್ಲೂ ಏರಿಕೆ... ನಾಳೆಯಿಂದ ನೂತನ ದರ ಜಾರಿ
70 ಸಚಿವರು(ಶೇ.90) ಕೋಟ್ಯಧಿಪತಿಗಳಾಗಿದ್ದು, ಅವರ ಸರಾಸರಿ ಆಸ್ತಿ ಮೌಲ್ಯ 16.24 ಕೋಟಿ ಎಂದು ತಿಳಿದು ಬಂದಿದೆ. ಪ್ರಮುಖವಾಗಿ ನಾಲ್ವರು ಸಚಿವರ ಒಟ್ಟು ಆಸ್ತಿ 50 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ. ಅವರೆಂದರೆ ಜ್ಯೋತಿರಾಧಿತ್ಯ ಸಿಂಧಿಯಾ, ಪಿಯೂಷ್ ಗೋಯಲ್, ನಾರಾಯಣ್ ರಾಣೇ ಹಾಗೂ ರಾಜೀವ್ ಚಂದ್ರಶೇಖರ್. ಮೊನ್ನೆ ಪುನರ್ ರಚನೆಗೊಂಡ ಮೋದಿ ಸಂಪುಟದಲ್ಲಿ 15 ಸಂಸದರು ಕ್ಯಾಬಿನೆಟ್ ದರ್ಜೆ ಹಾಗೂ 28 ಸಂಸದರು ರಾಜ್ಯ ಖಾತೆ ಸಚಿವ ಸ್ಥಾನ ವಹಿಸಿಕೊಂಡಿದ್ದಾರೆ.