ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಕೊನೆಯ ಹಾಗೂ 2023ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಇಂದು ಮಂಡಿಸುತ್ತಿದ್ದಾರೆ. ನಿರ್ಮಲಾ ಸೀತರಾಮನ್ ಅವರು ಮಂಡಿಸುತ್ತಿರುವ 6ನೇ ಬಜೆಟ್ ಇದಾಗಿದೆ. ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ವಿಶೇಷ ಯೋಜನೆಗಳನ್ನು ನೀಡಿರುವ ನಿರ್ಮಲಾ ಸೀತರಾಮನ್ ಬಜೆಟ್ ಭಾಷಣದಲ್ಲಿ, ಉದ್ಯಮಿಗಳಿಂದ ಕೃಷಿ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ಕೃಷಿಕರಿಗೆ ನೀಡುವ ಸಾಲದ ಯೋಜನೆಯ ಕ್ರೆಡಿಟ್ ಗುರಿಯನ್ನು 20 ಲಕ್ಷ ಕೋಟಿವರೆಗೆ ವಿಸ್ತರಿಸಲಾಗುವುದು ಎಂದಿರುವ ಅವರು ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು ಎಂದು ಸೀತಾರಾಮನ್ ಸಂಸತ್ತಿನಲ್ಲಿ ಹೇಳಿದರು.
ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು(digital public infrastructure) ಮುಕ್ತವಾದ ಮೂಲ, ಮುಕ್ತ ಗುಣಮಟ್ಟ ಮತ್ತು ಪರಸ್ಪರ ಕಾರ್ಯಸಾಧ್ಯವಾದ ಸಾರ್ವಜನಿಕ ವೇದಿಕೆಯಾಗಿ ನಿರ್ಮಿಸಲಾಗುವುದು. ಇದು ಬೆಳೆ ಯೋಜನೆ ಮಾಡುವ ಸಂದರ್ಭ ರೈತ ಕೇಂದ್ರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಕೃಷಿ ಕ್ಷೇತ್ರ ಉತ್ತಮವಾಗಿ ಕಾರ್ಯನಿರ್ವಹಿಸಿದೆ, ಆದರೆ ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳು, ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚ ಮುಂತಾದ ಸವಾಲುಗಳನ್ನು ಜಯಿಸಲು ಕ್ಷೇತ್ರಕ್ಕೆ 'ಮರು ದೃಷ್ಟಿಕೋನ' ಅಗತ್ಯವಿದೆ ಎಂದು ಹಣಕಾಸು ಸಚಿವರು ಹೇಳಿದರು.
ಕೃಷಿಕರ ಆದಾಯ ಹೆಚ್ಚಿಸುವಂತಹ ಯೋಜನೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಪಿಎಂ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಉಪಯೋಜನೆ ಘೋಷಣೆಗಳನ್ನು ಘೋಷಣೆ ಮಾಡಲಾಗುವುದು. ಇದಕ್ಕಾಗಿ 6,000 ಕೋಟಿ ರೂ. ಮೀಸಲಿಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದರು.
ಸಿರಿಧಾನ್ಯಗಳ ಸಂಶೋಧನಾ ಕೇಂದ್ರ: ಶ್ರೀ ಅನ್ನ ಗೋಧಿ, ಶ್ರೀ ಅನ್ನ ರಾಗಿ, ಶ್ರೀ ಅನ್ನ ಸಜ್ಜೆ ಸೇರಿದಂತೆ ಸಿರಿಧಾನ್ಯಗಳ ಕೃಷಿಗೆ ಹೊಸ ಯೋಜನೆ ಜಾರಿಗೊಳಿಸಲಾಗುವುದು. ಇದಕ್ಕೆ ಪೂರಕವಾಗಿ ಹೈದರಾಬಾದ್ನಲ್ಲಿ ಶ್ರೀ ಅನ್ನ ಸಂಶೋಧನಾ ಕೇಂದ್ರ ಆರಂಭ ಮಾಡಲಾಗುವುದು ಎಂದು ನಿರ್ಮಲಾ ತಿಳಿಸಿದರು.
ಭಾರತದಲ್ಲಿ ಕೃಷಿ ಕ್ಷೇತ್ರ ಕಳೆದ ಆರು ವರ್ಷಗಳಲ್ಲಿ ಶೇ 4.6ರಷ್ಟು ಸಾಮಾನ್ಯ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್)ಕಂಡಿದೆ. 2013 ರಿಂದ 2023 ರ ಆರ್ಥಿಕ ವರ್ಷದಲ್ಲಿ, ಒಟ್ಟಾರೆ ಬಜೆಟ್ 11 ಪ್ರತಿಶತದಷ್ಟು ಹೆಚ್ಚಾಗಿದ್ದು, ಕೃಷಿ ಕ್ಷೇತ್ರ ಮತ್ತು ಗ್ರಾಮೀಣ ಅಭಿವೃದ್ಧಿಗೆ ಶೇಕಡಾ 12 CAGR(ಸಂಯುಕ್ತ ವಾರ್ಷಿಕ ಬೆಳವಣಿಗೆ ದರ)ನಲ್ಲಿ ಹೆಚ್ಚಳವಾಗಿದೆ.
ಜನಸಂಖ್ಯೆಯ ಹೆಚ್ಚಿನ ಭಾಗವು ಜೀವನೋಪಾಯಕ್ಕಾಗಿ ಕೃಷಿ ಕ್ಷೇತ್ರವನ್ನು ಅವಲಂಬಿಸಿದ್ದರೂ, ಕಡಿಮೆ ಆದಾಯ ಮತ್ತು ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಈ ಕ್ಷೇತ್ರ ಹೆಚ್ಚು ಕಾರ್ಯಸಾಧ್ಯವಾಗಿಲ್ಲ. ಹಿಂದಿನ ಬಜೆಟ್‌ನಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಕ್ಕೆ ಒಟ್ಟು 1.32 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಈ ಬಾರಿಯ ಬಜೆಟ್‌ನಲ್ಲಿ ಕಳೆದ ಬಾರಿಯ ಬಜೆಟ್‌ಗಿಂತ ಶೇ.0.7ರಷ್ಟು ಹೆಚ್ಚು ಮೀಸಲಿಡಲಾಗಿದೆ.
ಕೇಂದ್ರದ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ನೀಡಿರುವ ಪ್ರಾಮುಖ್ಯತೆಯನ್ನು ಗಮನಿಸಿರುವ ತಜ್ಞರು, ವಲಯದಲ್ಲಿ ಕೃಷಿಕರನ್ನು ಉಳಿಸಿಕೊಳ್ಳಲು ಉತ್ತಮ ವ್ಯವಹಾರವನ್ನು ಖಚಿತಪಡಿಸಿಕೊಳ್ಳಲು ಉತ್ತಮ ಕೃಷಿ ಸುಧಾರಣೆಗಳನ್ನು ಕೈಗೊಳ್ಳುವ ಮತ್ತು ವಾಣಿಜ್ಯೀಕರಣ ಮತ್ತು ವೈವಿಧ್ಯೀಕರಣದತ್ತ ಸಾಗುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ