ಮುಂಬೈ, ಮಹಾರಾಷ್ಟ್ರ: ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಯೂನಿಯನ್ ಬಜೆಟ್ 2023 ಭಾಷಣ ಆರಂಭಿಸಲಿದ್ದಾರೆ. ಮುಂಬರುವ 2024 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಪ್ರಸ್ತುತ ನರೇಂದ್ರ ಮೋದಿ ಸರ್ಕಾರವು ಮಂಡಿಸಲಿರುವ ಕೊನೆಯ ಪೂರ್ಣ ಬಜೆಟ್ ಇದಾಗಿದೆ. ಬಜೆಟ್‌ಗೂ ಮುನ್ನ ಭಾರತೀಯ ಷೇರು ಮಾರುಕಟ್ಟೆ ಏರಿಕೆ ಹಾದಿ ಹಿಡಿದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಉತ್ತಮ ಆರಂಭ ಕಂಡಿವೆ. ಡಾಲರ್ ಎದುರು ರೂಪಾಯಿ ರೂಪಾಯಿ ಮೌಲ್ಯ ಶೇ.0.18ರಷ್ಟು ಕುಸಿದಿದೆ.
ಸೆನ್ಸೆಕ್ಸ್ - ನಿಫ್ಟಿಯಲ್ಲಿ ಬಲವಾದ ಏರಿಕೆ: 2022 ರಲ್ಲಿ ಸಾಮಾನ್ಯ ಬಜೆಟ್ ಮಂಡಿಸಿದಾಗ ಬಜೆಟ್ ದಿನದಂದು ಷೇರು ಮಾರುಕಟ್ಟೆಯಲ್ಲಿ ಅದ್ಭುತ ಬೆಳವಣಿಗೆ ಕಂಡು ಬಂದಿತ್ತು. ಫೆಬ್ರವರಿ 1, 2023 ರಂದು ಬಜೆಟ್ ಮಂಡನೆಗೆ ಮುನ್ನ ಎರಡೂ ಷೇರು ಮಾರುಕಟ್ಟೆ ಸೂಚ್ಯಂಕಗಳು ಉತ್ತಮ ಆರಂಭ ಕಂಡಿವೆ. BSE ಯ 30-ಷೇರುಗಳ ಸೆನ್ಸೆಕ್ಸ್ 59,987.22 ಮಟ್ಟದಲ್ಲಿ ಅಂದರೆ 437.32 ಅಂಕಗಳ ಏರಿಕೆಯೊಂದಿಗೆ ವ್ಯವಹಾರ ಆರಂಭಿಸಿದೆ. ಮತ್ತೊಂದೆಡೆ, NSE ಯ ನಿಫ್ಟಿ ಸೂಚ್ಯಂಕವು 17,776.70 ಮಟ್ಟದಲ್ಲಿ ವ್ಯಾಪಾರವನ್ನು ಪ್ರಾರಂಭಿಸಿದ್ದು, 131.95 ಅಥವಾ 0.65 ರಷ್ಟು ಏರಿಕೆ ಕಂಡಿದೆ.
ಬಜೆಟ್‌ಗೂ ಮುನ್ನವೇ ಗ್ರೀನ್..: ಮಂಗಳವಾರ ಕೊನೆಯ ಟ್ರೇಡಿಂಗ್ ಸೆಷನ್ ಅಥವಾ ಬಜೆಟ್‌ಗೆ ಒಂದು ದಿನ ಮೊದಲು ಭಾರತೀಯ ಷೇರು ಮಾರುಕಟ್ಟೆ ಏರಿಳಿತದ ನಂತರ ಅಂತಿಮವಾಗಿ ಗ್ರೀನ್ ಮಾರ್ಕ್‌ನಲ್ಲಿ ಕೊನೆಗೊಂಡಿತು. ವಹಿವಾಟಿನ ಅಂತ್ಯದ ವೇಳೆಗೆ, ಬಿಎಸ್‌ಇ ಸೆನ್ಸೆಕ್ಸ್ 49.49 ಪಾಯಿಂಟ್ ಅಥವಾ ಶೇಕಡಾ 0.08 ರಷ್ಟು ಏರಿಕೆಯೊಂದಿಗೆ 59,549.90 ಕ್ಕೆ ಕೊನೆಗೊಂಡಿತು. ಅದೇ ಸಮಯದಲ್ಲಿ, ನಿಫ್ಟಿ 33.35 ಪಾಯಿಂಟ್ ಅಂದರೆ, ಶೇಕಡಾ 0.19 ರಷ್ಟು ಏರಿಕೆಯೊಂದಿಗೆ 17,682.30 ಮಟ್ಟದಲ್ಲಿ ಅಂತ್ಯಗೊಂಡಿತ್ತು.
ಕಳೆದ ಐದು ಬಜೆಟ್ ದಿನಗಳಲ್ಲಿ ಷೇರು ಮಾರುಕಟ್ಟೆ: 2022 ರಲ್ಲಿ, ಫೆಬ್ರವರಿ 1 ರಂದು, ಸೆನ್ಸೆಕ್ಸ್ 848 ಅಂಕಗಳ ಏರಿಕೆಯೊಂದಿಗೆ 58,862.57 ಮಟ್ಟದಲ್ಲಿ ಕೊನೆಗೊಂಡಿತು. ಅದೇ ಸಮಯದಲ್ಲಿ, ನಿಫ್ಟಿ 237 ಅಂಕಗಳ ಏರಿಕೆಯೊಂದಿಗೆ 17,577 ನಲ್ಲಿ ಕೊನೆಗೊಂಡಿತು. 2021 ರಲ್ಲಿ, ಫೆಬ್ರವರಿ ಮೊದಲ ರಂದು ಸೆನ್ಸೆಕ್ಸ್‌ನಲ್ಲಿ ಶೇಕಡಾ 5 ರಷ್ಟು ಕಂಡು ಬಂದಿದೆ. ಹಿಂದಿನ 2020 ರಲ್ಲಿ, ಬಜೆಟ್ ದಿನದಂದು ಸೆನ್ಸೆಕ್ಸ್‌ನಲ್ಲಿ ಶೇಕಡಾ 2.43 ರಷ್ಟು ಕುಸಿತ ಕಂಡುಬಂದಿದೆ. 2019 ರಲ್ಲಿ, ಬಜೆಟ್ ದಿನದಂದು ಸೆನ್ಸೆಕ್ಸ್ ಶೇಕಡಾ 0.59 ರಷ್ಟು ಲಾಭವನ್ನು ದಾಖಲಿಸಿದೆ. ಆದರೆ 2018 ರಲ್ಲಿ, ಫೆಬ್ರವರಿ 1 ರಂದು, ಸೆನ್ಸೆಕ್ಸ್ ಶೇಕಡಾ 0.16 ರಷ್ಟು ಕುಸಿತ ಕಂಡಿತ್ತು.
ಬಂಡವಾಳ ಲಾಭದ ತೆರಿಗೆಯ ಮೇಲೆ ನಿಗಾ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಅಧಿಕಾರಾವಧಿಯ ಐದನೇ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಈ ಸಮಯದಲ್ಲಿ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಬಗ್ಗೆ ದೊಡ್ಡ ಘೋಷಣೆಯನ್ನು ಸಹ ಮಾಡಬಹುದು. ಷೇರುಪೇಟೆಯಲ್ಲಿ ಕಂಡುಬರುತ್ತಿರುವ ಏರಿಕೆಯು ಹಣಕಾಸು ಸಚಿವರ ಘೋಷಣೆಯ ನಂತರ ಪರಿಣಾಮ ಬೀರಬಹುದು. ಬಂಡವಾಳ ಗಳಿಕೆ ತೆರಿಗೆಯನ್ನು ಹೆಚ್ಚಿಸುವ ಅಥವಾ ಬದಲಾಯಿಸುವ ಬಗ್ಗೆ ಚರ್ಚೆ ನಡೆದರೆ ಮತ್ತು ಮಾರುಕಟ್ಟೆಯು ಅದನ್ನು ಇಷ್ಟಪಡದಿದ್ದರೆ ಆಗ ತೀವ್ರ ಕುಸಿತವನ್ನೂ ಕಾಣಬಹುದಾಗಿದೆ.
ಓದಿ: ಕೇಂದ್ರ ಬಜೆಟ್: ಸಂಸತ್ತಿನೆಡೆಗೆ ಹೊರಟ ಸಚಿವೆ ನಿರ್ಮಲಾ ಸೀತಾರಾಮನ್