ನ್ಯೂಯಾರ್ಕ್(ಅಮೆರಿಕ): ಮಹತ್ವದ ಉಪಕ್ರಮವೊಂದರಲ್ಲಿ, ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ (UNGA) ಮೊದಲ ಬಾರಿಗೆ ಹಿಂದಿ ಭಾಷೆಯನ್ನು ಉಲ್ಲೇಖಿಸುವ ಬಹುಭಾಷಾ ಕುರಿತ ಭಾರತ ಪ್ರಾಯೋಜಿತ ನಿರ್ಣಯವನ್ನು ಶುಕ್ರವಾರ ಅಂಗೀಕರಿಸಿದೆ. ಈ ನಿರ್ಣಯದ ಪ್ರಕಾರ ಹಿಂದಿ ಭಾಷೆ ಸೇರಿದಂತೆ ಅಧಿಕೃತ ಮತ್ತು ಅಧಿಕೃತವಲ್ಲದ ಭಾಷೆಗಳಲ್ಲಿ ಪ್ರಮುಖ ಸಂವಹನ ಮತ್ತು ಸಂದೇಶಗಳನ್ನು ಪ್ರಸಾರ ಮಾಡಲಿದೆ.
ಈ ವರ್ಷ ಮೊದಲ ಬಾರಿಗೆ, ನಿರ್ಣಯವು ಹಿಂದಿ ಭಾಷೆ ಜೊತೆಗೆ ಬಾಂಗ್ಲಾ ಮತ್ತು ಉರ್ದುವನ್ನೂ ಉಲ್ಲೇಖಿಸಿದೆ. ಈ ಸೇರ್ಪಡೆಗಳನ್ನು ನಾವು ಸ್ವಾಗತಿಸುತ್ತೇವೆ. ಬಹುಭಾಷೆಯನ್ನು ಯುಎನ್ನ ಪ್ರಮುಖ ಮೌಲ್ಯವೆಂದು ಗುರುತಿಸಲಾಗಿದ್ದು, ಬಹುಭಾಷೆಗೆ ಆದ್ಯತೆ ನೀಡಿದ ಪ್ರಧಾನ ಕಾರ್ಯದರ್ಶಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಟಿ.ಎಸ್. ತಿರುಮೂರ್ತಿ ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಹಿಂದಿ ಬಳಕೆಯನ್ನು ಉತ್ತೇಜಿಸುವ ತನ್ನ 'ಹಿಂದಿ @ ಯುಎನ್' ಯೋಜನೆಯ ಭಾಗವಾಗಿ ಭಾರತ ಸರ್ಕಾರ ವಿಶ್ವಸಂಸ್ಥೆಯ ಜಾಗತಿಕ ಸಂಪರ್ಕ ಇಲಾಖೆಯ ಜೊತೆಗೆ ಹೆಚ್ಚುವರಿ ಬಜೆಟ್ ಕೊಡುಗೆಯನ್ನು ನೀಡುವ ಮೂಲಕ ಪಾಲುದಾರಿಕೆ ಹೊಂದಿದೆ. ವಿಶ್ವದೆಲ್ಲೆಡೆ ಇರುವ ಹಿಂದಿ ಭಾಷಿಕರಿಗೆ ಜಾಗತಿಕ ವಿಷಯಗಳ ಕುರಿತು ಹಿಂದಿ ಮೂಲಕ ಅರಿವು ಮೂಡಿಸಲು 2018ರಲ್ಲಿ ಭಾರತ ಸರ್ಕಾರ ಈ ಯೋಜನೆ ಆರಂಭಿಸಿತ್ತು. ಇದರ ಭಾಗವಾಗಿ ಪ್ರತಿವಾರ ವಿಶ್ವಸಂಸ್ಥೆ ರೇಡಿಯೋದಲ್ಲಿ ಹಿಂದಿ ವಾರ್ತೆ ಇರುತ್ತದೆ. ಇದಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕವೂ ಸುದ್ದಿ ಬಿತ್ತರಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ, ಫೆಬ್ರವರಿ 1, 1946 ರಂದು ತನ್ನ ಮೊದಲ ಅಧಿವೇಶನದಲ್ಲಿ ಅಂಗೀಕರಿಸಿದ, ತನ್ನ ಗುರಿ ಮತ್ತು ಚಟುವಟಿಕೆಗಳ ಬಗ್ಗೆ ಪ್ರಪಂಚದ ಜನರಿಗೆ ಸಂಪೂರ್ಣವಾಗಿ ತಿಳಿಸದಹೊರತು ವಿಶ್ವಸಂಸ್ಥೆಯು ತನ್ನ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ UNSC ನಿರ್ಣಯ 13(1) ಅನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ವಿಶ್ವಸಂಸ್ಥೆಯಲ್ಲಿ ಬಹುಭಾಷಾವಾದವನ್ನು ನಿಜವಾದ ಅರ್ಥದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ಮತ್ತು ಈ ಉದ್ದೇಶವನ್ನು ಸಾಧಿಸುವಲ್ಲಿ ವಿಶ್ವಸಂಸ್ಥೆಯ ಜತೆ ಭಾರತ ಸದಾ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಅವರು ಹೇಳಿದರು.
ಅರೇಬಿಕ್, ಚೈನೀಸ್, ಇಂಗ್ಲಿಷ್, ಫ್ರೆಂಚ್, ರಷ್ಯನ್ ಮತ್ತು ಸ್ಪ್ಯಾನಿಷ್ ವಿಶ್ವಸಂಸ್ಥೆಯ ಆರು ಅಧಿಕೃತ ಭಾಷೆಗಳು; ಇಂಗ್ಲಿಷ್ ಮತ್ತು ಫ್ರೆಂಚ್ ಯುನೈಟೆಡ್ ನೇಷನ್ಸ್ ಸೆಕ್ರೆಟರಿಯೇಟ್‌ನ ಬಳಕೆಯ ಭಾಷೆಗಳು.
ಇದನ್ನೂ ಓದಿ: ಇದಪ್ಪಾ ಭಾಷಾಭಿಮಾನ! ಕೆನಡಾ ಪಾರ್ಲಿಮೆಂಟ್ನಲ್ಲಿ ಕನ್ನಡದ ಕಂಪು ಸೂಸಿದ ಚಂದ್ರ ಆರ್ಯ