ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದು, ಈ ಬಗ್ಗೆ ರಾಷ್ಟ್ರ ರಾಜಧಾನಿ ದೆಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಗಳು ನಡೆಯುತ್ತಿವೆ ಮತ್ತು ಕಾಂಟಿನ್ಜೆನ್ಸಿ (contingency) ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉಕ್ರೇನ್‌ನಲ್ಲಿರುವ 20,000 ಭಾರತೀಯ ಪ್ರಜೆಗಳಲ್ಲಿ ಕೆಲವರು ಮಾತ್ರ ಇದುವರೆಗೆ ಭಾರತಕ್ಕೆ ಮರಳಿದ್ದಾರೆ. ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಇನ್ನೂ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ವಾಯುಮಾರ್ಗಗಳನ್ನು ಅಂದರೆ ವಿಮಾನ ನಿಲ್ದಾಣಗಳನ್ನು ಉಕ್ರೇನ್ ಸರ್ಕಾರ ಮುಚ್ಚಿರುವ ಕಾರಣ ಉಳಿದಿರುವ ಭಾರತೀಯರನ್ನು ಸ್ಥಳಾಂತರಿಸುವ ಪರ್ಯಾಯ ಮಾರ್ಗಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತಿದೆ.
ರಷ್ಯನ್ ಮಾತನಾಡುವ ಭಾರತದ ಅಧಿಕಾರಿಗಳನ್ನು ದೆಹಲಿಯಿಂದ ಉಕ್ರೇನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ಕಳುಹಿಸಲಾಗುತ್ತಿದ್ದು, ಉಕ್ರೇನ್‌ನ ನೆರೆಯ ದೇಶಗಳಲ್ಲೂ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡಿದ ಸಲಹೆಗಳನ್ನು ಎಚ್ಚರಿಕೆಯಿಂದ ಅನುಸರಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಲಾಗುತ್ತಿದೆ.
ಇದನ್ನೂ ಓದಿ: ವಿಮಾನ ನಿಲ್ದಾಣಗಳನ್ನು ಮುಚ್ಚಿದ ಉಕ್ರೇನ್; ಅಪಾಯಕಾರಿ ವಾಯುಪ್ರದೇಶದ ಎಚ್ಚರಿಕೆ
ಉಕ್ರೇನ್ ರಾಜಧಾನಿ ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೊರಡಿಸಿದ ಇತ್ತೀಚಿನ ಸಲಹೆಯಲ್ಲಿ, ಭಾರತೀಯ ಪ್ರಜೆಗಳು ಎಲ್ಲಿದ್ದರೂ ಶಾಂತವಾಗಿರಲು ಮತ್ತು ಸುರಕ್ಷಿತವಾಗಿರಲು ಕೇಳಿಕೊಳ್ಳಲಾಗಿದೆ. ಅದು ನಿಮ್ಮ ಮನೆಗಳು, ವಸತಿಗಳು, ಹಾಸ್ಟೆಲ್‌ಗಳು, ಸಾರಿಗೆ ಎಲ್ಲಿಯೇ ಇರಲಿ ಅಲ್ಲಿಯೇ ಸುರಕ್ಷಿತರಾಗಿರುವಂತೆ ಹಾಗೂ ಕೈವ್‌ಗೆ ಪ್ರಯಾಣಿಸುವ ಎಲ್ಲರೂ ತಮ್ಮ ತಮ್ಮ ನಗರಗಳಿಗೆ, ವಿಶೇಷವಾಗಿ ಪಶ್ಚಿಮ ದೇಶಗಳ ಗಡಿಭಾಗಗಳಲ್ಲಿ ಸುರಕ್ಷಿತ ಸ್ಥಳಗಳ ಕಡೆಗೆ ತಾತ್ಕಾಲಿಕವಾಗಿ ಹಿಂತಿರುಗಲು ಸೂಚಿಸಲಾಗಿದೆ.