ಅಹಮದಾಬಾದ್ (ಗುಜರಾತ್): ಗುಜರಾತ್ನ ಮೂರು ನಾಗರೀಕ ಆಸ್ಪತ್ರೆಗಳ ಕನಿಷ್ಠ 450 ತರಬೇತಿ ವೈದ್ಯರು ಮುಷ್ಕರ ನಡೆಸಿದ್ದಾರೆ. ಸರ್ಕಾರವು ಭರವಸೆ ನೀಡಿದ 'ಕೋವಿಡ್ ಭತ್ಯೆ' ನೀಡದ ಹಿನ್ನೆಲೆ ವೈದ್ಯರು ಈ ನಿರ್ಧಾರ ಕೈಗೊಂಡಿದ್ದಾರೆ.
ಅಹಮದಾಬಾದ್, ಗಾಂಧಿನಗರ ಮತ್ತು ವಲ್ಸಾದ್‌ನ ಸೋಲಾ ಪ್ರದೇಶದಲ್ಲಿ ಗುಜರಾತ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸೊಸೈಟಿ (ಜಿಎಂಇಆರ್ಎಸ್) ನಡೆಸುತ್ತಿರುವ ವೈದ್ಯಕೀಯ ಕಾಲೇಜುಗಳಿಗೆ ಕೊರೊನಾ ಸಂಬಂಧ ಸೇವೆಗೆ ವೈದ್ಯರು ಸೇರಿದ್ದರು.
ಅರೆಕಾಲಿಕ ವೈದ್ಯರಿಗೆ ಕೋವಿಡ್ ಭತ್ಯೆಯಾಗಿ ಮಾಸಿಕ 5,000 ರೂ.ಗಳನ್ನು ಜೂನ್ ವರೆಗೆ ನೀಡಲಾಗುತ್ತದೆ ಎಂದು ಸರ್ಕಾರ ಘೋಷಣೆ ಮಾಡಿತ್ತು, ಆದರೆ ನುಡಿದಂತೆ ಸರ್ಕಾರ ನಡೆದುಕೊಳ್ಳದ ಹಿನ್ನೆಲೆ ಈ ತರಬೇತಿ ವೈದ್ಯರು ಹೋರಾಟಕ್ಕೆ ಮುಂದಾಗಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ಶೀಘ್ರದಲ್ಲೇ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಹಾಗೆಯೇ ಹೋರಾಟ ಮಾಡುತ್ತಿರುವ ವೈದ್ಯರು ಕರ್ತವ್ಯಕ್ಕೆ ಮರಳಬೇಕು. ರೋಗಿಗಳ ಬಗ್ಗೆ ಕಾಳಜಿ ತೋರಿಸಬೇಕು ಎಂದು ಇದೇ ವೇಳೆ ಹೇಳಿದ್ದಾರೆ.
ನಾವು ಯಾವುದೇ ಭತ್ಯೆ ನೀಡದಿದ್ದರೂ ಅವರು ತಮ್ಮ ತರಬೇತಿ ಪೂರ್ಣಗೊಳಿಸಬೇಕು. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ತರಬೇತಿ ಮಾಡಲು ವಿದ್ಯಾರ್ಥಿಗಳು ತಮ್ಮ ಜೇಬಿನಿಂದ ಪಾವತಿಸಬೇಕಾಗುತ್ತದೆ. ಈ ಇಂಟರ್ನ್ ವೈದ್ಯರು ರೋಗಿಗಳ ಬಗ್ಗೆ ಸ್ವಲ್ಪ ಕಾಳಜಿ ತೋರಿಸಬೇಕು ಎಂದು ಏರುಧ್ವನಿಯಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.