ಮುಂಬೈ(ಮಹಾರಾಷ್ಟ್ರ): ವಿಶ್ವಾಸಮತಯಾಚನೆ ಮಾಡಲು ಸುಪ್ರೀಂಕೋರ್ಟ್ ಸೂಚನೆ ನೀಡಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಣೆ ಮಾಡಿದರು. ಫೇಸ್ಬುಕ್ ಲೈವ್‌ನಲ್ಲಿ ತಮ್ಮ ನಿರ್ಧಾರವನ್ನು ಅವರು ಪ್ರಕಟಿಸಿದರು. ಈ ಮೂಲಕ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿದ್ದ ಮಹಾವಿಕಾಸ್ ಅಘಾಡಿ ಮೈತ್ರಿ ಸರ್ಕಾರ 2 ವರ್ಷ 7 ತಿಂಗಳಲ್ಲೇ ಪತನಗೊಂಡಿತು.
ವಿಶ್ವಾಸಮತಯಾಚನೆ ಮಾಡಲು ಸುಪ್ರೀಂಕೋರ್ಟ್ ಸೂಚನೆ ನೀಡುತ್ತಿದ್ದಂತೆ ಫೇಸ್ಬುಕ್ನಲ್ಲಿ ಲೈವ್‌ಗೆ ಬಂದು ಮಾತನಾಡಿದ ಉದ್ಧವ್ ಅನೇಕ ವಿಚಾರಗಳನ್ನು ಹಂಚಿಕೊಂಡರು. ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ ಎಂದಿರುವ ಠಾಕ್ರೆ, "ಬಾಳಾ ಸಾಹೇಬ್ ಠಾಕ್ರೆ ಅವರ ಕನಸು ನನಸು ಮಾಡಿದ್ದೇನೆ. ಔರಂಗಾಬಾದ್ಗೆ ಸಂಭಾಜಿನಗರ ಎಂದು ಮರುನಾಮಕರಣ ಮಾಡಿದ್ದೇನೆ" ಎಂದರು. ಇದೇ ವೇಳೆ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ತಿಳಿಸಿದರು.
"ರಿಕ್ಷಾವಾಲಾನನ್ನೂ ಸಚಿವನನ್ನಾಗಿ ಮಾಡಿರುವ ಹೆಮ್ಮೆ ನನಗಿದೆ. ಬರುವ ದಿನಗಳಲ್ಲಿ ಶಿವಸೇನೆ ಮತ್ತಷ್ಟು ಬಲಿಷ್ಠವಾಗಲಿದೆ. ಸದ್ಯ ನಮ್ಮವರೇ ನಮ್ಮನ್ನು ಕೈಬಿಟ್ಟರು" ಎಂದು ಶಿವಸೇನೆಯ ಬಂಡಾಯ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಸ್ಥಾನದ ಜೊತೆಗೆ ಉದ್ಧವ್ ಠಾಕ್ರೆ ವಿಧಾನ ಪರಿಷತ್ ಸ್ಥಾನವನ್ನೂ ತ್ಯಜಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ನಾಳೆ ವಿಶ್ವಾಸಮತ ಯಾಚನೆ ಮಾಡಬೇಕಿತ್ತು. ಆದರೆ, ಇದಕ್ಕೂ ಮುನ್ನವೇ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನನ್ನನು ಬೆಂಬಲಿಸಿದ್ದಕ್ಕಾಗಿ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸಿರುವ ಉದ್ಧವ್ ಠಾಕ್ರೆ, ಆಡಳಿತಾವಧಿಯಲ್ಲಿ ಎಲ್ಲ ರೀತಿಯ ಸಹಕಾರ ನೀಡಿದ್ದಕ್ಕಾಗಿ ಮಿತ್ರಪಕ್ಷಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಅನಿರೀಕ್ಷಿತವಾಗಿ ಬಂದಿದ್ದೇನೆ. ಅದೇ ರೀತಿ ಇದೀಗ ನಿರ್ಗಮಿಸುತ್ತಿದ್ದೇನೆ. ಮುಖ್ಯಮಂತ್ರಿ ಸ್ಥಾನಕ್ಕೆ ಅಟ್ಟಿಕೊಂಡು ಕುಳಿತುಕೊಳ್ಳುವ ವ್ಯಕ್ತಿ ನಾನಲ್ಲ. ಹಾಗೆಂದು ಶಾಶ್ವತವಾಗಿ ಇಲ್ಲಿಂದ ತೆರಳುವುದಿಲ್ಲ. ಮತ್ತೊಂದು ಶಿವಸೇನೆ ಭವನದಲ್ಲಿ ಕುಳಿತುಕೊಳ್ಳಲಿದ್ದೇನೆ ಎಂದಿದ್ದಾರೆ. ನಾವೆಲ್ಲರೂ ಶಿವಸೇನೆಯಲ್ಲಿದ್ದೇವೆ. ಮತ್ತೊಮ್ಮೆ ಒಗ್ಗೂಡಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.