ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಅತಿ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 3ನೇ ಅಲೆ ತಡೆಯುವುದು ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳ ಕುರಿತು ಕೇಂದ್ರ ಗೃಹ ಸಚಿವಾಯದ ಕಾರ್ಯದರ್ಶಿ ಅಜಯ್ ಕುಮಾರ್ ಬಲ್ಲಾ ಇಂದು ಮಹತ್ವದ ಪರಿಶೀಲನಾ ಸಭೆ ನಡೆಸಿದರು.
ಈ ಸಭೆಯಲ್ಲಿ ಕೋವಿಡ್ ಸ್ಪಂದನಾ 10 ತಂಡಗಳು, ಕೋವಿಡ್ ಕುಮಾರ್ ನ್ಯಾಷನಲ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಡಾ.ವಿ.ಕೆ.ಪೌಲ್ ಹಾಗೂ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಕೋವಿಡ್ ಉಲ್ಬಣದ ವಿರುದ್ಧ ಹೋರಾಡಲು ಅಗತ್ಯವಿರುವ ಆಸ್ಪತ್ರೆಯ ಹಾಸಿಗೆಗಳು, ಆಮ್ಲಜನಕ ಹಾಗೂ ಇತರ ನಿರ್ಣಾಯಕ ಘಟಕಗಳ ಲಭ್ಯತೆಯ ಬಗ್ಗೆ ಸಭೆಯಲ್ಲಿ ವಿಸ್ತಾರವಾಗಿ ಚರ್ಚಿಸಲಾಗಿದೆ ಎಂದು ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.
ಸಾಂಕ್ರಾಮಿಕ ರೋಗವನ್ನು ಎದುರಿಸಲು ಕೇಂದ್ರ ಸರ್ಕಾರವು ಕಳೆದ ವರ್ಷದ ಮೇನಲ್ಲಿ 10 ಅಧಿಕೃತ ತಂಡಗಳನ್ನು ರಚಿಸಿತ್ತು. ಕೊರೊನಾ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಪರಿಷ್ಕರಿಸಲಾಗುತ್ತಿದ್ದು, ದೇಶಾದ್ಯಂತ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲು ಒತ್ತು ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೋವಿಡ್ ನಿರ್ವಹಣೆಗಾಗಿ ಜಿಲ್ಲಾ ಮತ್ತು ಉಪ-ಜಿಲ್ಲಾ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಖಾಸಗಿ ವಲಯದ ಅಸ್ತಿತ್ವದಲ್ಲಿರುವ ಕೋವಿಡ್‌ಗೆ ಮೀಸಲಾದ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಸಭೆಯಲ್ಲಿ ಗ್ರಾಮೀಣ ಮತ್ತು ಮಕ್ಕಳ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ, ಕೇಂದ್ರ ಆರೋಗ್ಯ ಸಚಿವಾಲಯವು ಚುನಾವಣಾ ಆಯೋಗಕ್ಕೆ ಕೋವಿಡ್ ಸ್ಥಿತಿಯ ಬಗ್ಗೆ ವಿಶೇಷವಾಗಿ ಚುನಾವಣೆಗೆ ಒಳಪಡುವ ರಾಜ್ಯಗಳ ಬಗ್ಗೆ ವಿವರಿಸಿದೆ. ಚುನಾವಣಾ ಆಯೋಗವು ಕರೆದಿದ್ದ ಸಭೆಯಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಸಂಬಂಧಿಸಿದ ಎಲ್ಲಾ ನಿರ್ಣಾಯಕ ಸಂದರ್ಭಗಳನ್ನು ಎದುರಿಸಲು ಸನ್ನದ್ಧತೆಯ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 36 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ: ದೇಶದ ಮೆಟ್ರೋ ನಗರಗಳ ಕೋವಿಡ್ ಮಾಹಿತಿ ಹೀಗಿದೆ..