ಲಖನೌ: ಉತ್ತರ ಪ್ರದೇಶ ರಾಜಧಾನಿ ಲಖನೌನಲ್ಲಿ ಯುವಕರಿಬ್ಬರು ಹಾಡಹಗಲೇ ಮನೆಗೆ ನುಗ್ಗಿ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳು ಸಂತ್ರಸ್ತೆಯ ಅಶ್ಲೀಲ ಛಾಯಾಚಿತ್ರಗಳನ್ನು ಸೆರೆಹಿಡಿದು ಬೆದರಿಕೆ ಹಾಕಿದ್ಧಾರೆ ಎಂಬ ಆರೋಪವೂ ಕೇಳಿ ಬಂದಿದ್ದು, ಓರ್ವನನ್ನು ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಆಲಂಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅ.25ರಂದು ಈ ಘಟನೆ ನಡೆದಿದೆ. ತಾಯಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು. ಈ ಸಮಯದಲ್ಲಿ ಸಂಜೆ 4 ಗಂಟೆ ಸುಮಾರಿಗೆ ರಾಮನಗರ ನಿವಾಸಿ ಸುಮಿತ್ ಡೆಂಗೆ ಎಂಬಾತ ಮನೆಗೆ ಬಂದಿದ್ದ. ಬಾಗಿಲು ತೆರೆಯದಿದ್ದಾಗ ಬಹಳ ಹೊತ್ತಿನವರೆಗೆ ಬೆದರಿಕೆ ಹಾಕಿ ನಂತರ ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾನೆ. ಈ ವೇಳೆ, ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ, ಆಕೆಯ ಪ್ರತಿರೋಧದಿಂದಾಗಿ ಸಾಧ್ಯವಾಗದಿದ್ದಾಗ ತನ್ನ ಸ್ನೇಹಿತ ಸಾಹಿಲ್ ಸಿದ್ದಿಕಿ ಎಂಬಾತನಿಗೆ ಕರೆ ಮಾಡಿದ್ದಾನೆ. ಆಗ ಇಬ್ಬರೂ ಆಕೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯ ಸಹೋದರನಿಂದ ಬೆದರಿಕೆ: ಈ ಘಟನೆಯ ನಂತರ ಸುಮಿತ್ನ ಸಹೋದರ ಅಮನ್ ಎಂಬಾತ ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಲು ಶುರು ಮಾಡಿದ್ದಾನೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಬಾಲಕಿಯ ತಾಯಿಯನ್ನು ಹತ್ಯೆ ಮಾಡುವುದಾಗಿ ಮತ್ತು ಆಕೆಯ ಮುಖಕ್ಕೆ ಆ್ಯಸಿಡ್ ಎರಚುವ ಬೆದರಿಕೆ ಹಾಕುತ್ತಿದ್ದಾನೆ. ಅಷ್ಟೇ ಅಲ್ಲ, ಆರೋಪಿಯು ಅತ್ಯಾಚಾರದ ಸಮಯದಲ್ಲಿ ಸಂತ್ರಸ್ತೆಯ ಅಶ್ಲೀಲ ಛಾಯಾಚಿತ್ರಗಳನ್ನು ಸೆರೆಹಿಡಿದು, ಅವುಗಳನ್ನು ವೈರಲ್ ಮಾಡುವುದಾಗಿ ಹೆದರಿಸಿದ್ದಾನೆ ಎಂದು ಸಂತ್ರಸ್ತ ಕುಟುಂಬ ಹೇಳಿದೆ.
ಪೂರ್ವ ವಿಭಾಗದ ಎಡಿಸಿಪಿ ಸೈಯದ್ ಅಲಿ ಅಬ್ಬಾಸ್ ಪ್ರತಿಕ್ರಿಯಿಸಿ, ''ಸಂತ್ರಸ್ತ ಬಾಲಕಿ ಹಾಗೂ ಪ್ರಮುಖ ಆರೋಪಿ ಸುಮಿತ್ಗೆ ಈ ಮೊದಲೇ ಪರಿಚಯ ಇತ್ತು. ಸದ್ಯಕ್ಕೆ ಈತನನ್ನು ಬಂಧಿಸಲಾಗಿದೆ. ಈ ಘಟನೆ ಕುರಿತು ಸಿಸಿಸಿಟಿ ದೃಶ್ಯಾವಳಿ ಪರಿಶೀಲನೆ ನಡೆಸಲಾಗಿದೆ. ಅದನ್ನು ಪ್ರಕರಣದ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಉಳಿದ ಇಬ್ಬರ ಪಾತ್ರದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು'' ಎಂದು ತಿಳಿಸಿದರು.
ದೆಹಲಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ: ಮತ್ತೊಂದೆಡೆ, ದೆಹಲಿಯಲ್ಲಿ 30 ವರ್ಷದ ಮಹಿಳೆಯ ಮೇಲೆ ಪ್ರಾಪರ್ಟಿ ಡೀಲರ್ ಸೇರಿದಂತೆ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ವರದಿಯಾಗಿದೆ. ಬುರಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫ್ಲಾಟ್ ನೋಡಲು ತೆರಳಿದ್ದಾಗ ಆರೋಪಿಗಳು ಪಾನೀಯದಲ್ಲಿ ಡ್ರಗ್ಸ್ ಬೆರೆಸಿ ಕುಡಿಯಲು ಕೊಟ್ಟು ಕೃತ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಉತ್ತರ ದೆಹಲಿ ಡಿಸಿಪಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿ, ''ಅಕ್ಟೋಬರ್ 29ರಂದು ತಡರಾತ್ರಿ ಪೊಲೀಸರಿಗೆ ಮಹಿಳೆಯು ಕರೆ ಮಾಡಿ ತನ್ನ ಮೇಲಿನ ದೌರ್ಜನ್ಯದ ದೂರು ನೋಡಿದ್ದಾಳೆ. ತಾನು ಬಾಡಿಗೆ ಮನೆ ವೀಕ್ಷಿಸಲು ಆಸ್ತಿ ಡೀಲರ್ ಜೊತೆ ಹೋಗಿದ್ದೆ. ಮತ್ತೊಬ್ಬ ವ್ಯಕ್ತಿ ಸಹ ಈತನ ಜೊತೆಗಿದ್ದ. ಆಗ ಆರೋಪಿಗಳು ಕುಡಿಯಲು ಪಾನೀಯ ಕೊಟ್ಟಿದ್ದರು. ಇದನ್ನು ಕುಡಿದ ನಂತರ ಪ್ರಜ್ಞೆ ತಪ್ಪಿತು. ಬಳಿಕ ಅತ್ಯಾಚಾರ ಎಸಗಿದ ಬಳಿಕ ಆರೋಪಿಗಳಿಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬುವುದಾಗಿ ಮಹಿಳೆ ಮಾಹಿತಿ ನೀಡಿದ್ದಾರೆ'' ಎಂದು ವಿವರಿಸಿದರು.
''ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದರಲ್ಲಿ ಅತ್ಯಾಚಾರ ದೃಢಪಟ್ಟಿದೆ. ಹೀಗಾಗಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ನವೆಂಬರ್ 1ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಎರಡನೇ ಆರೋಪಿಗಾಗಿ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ'' ಎಂದು ಡಿಸಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ: ನೆರೆಹೊರೆಯ ಯುವಕರಿಂದಲೇ ಕೃತ್ಯ!