ಪೂಂಚ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳಲು ಯತ್ನಸಿದ ಇಬ್ಬರು ಭಯೋತ್ಪಾದಕರನ್ನು ಗಡಿ ಭದ್ರತಾ ರಕ್ಷಣಾ ಪಡೆ ಹೊಡೆದುರಳಿಸಿದೆ ಎಂದು ಲೆಫ್ಟಿನೆಂಟ್ ಕರ್ನಲ್ ಸುನಿಲ್ ಬರ್ತ್ವಾಲ್ ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 5/6ರ ಮಧ್ಯರಾತ್ರಿ ಪೂಂಚ್ ಜಿಲ್ಲೆಯ ಮಂಡಿ ಪ್ರದೇಶದಲ್ಲಿ ಇಬ್ಬರು ಉಗ್ರರು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತದೊಳಗೆ ನುಸುಳುತ್ತಿರುವುದು ಕಂಡು ಬಂದಿತ್ತು.
ಕೂಡಲೇ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ವೇಳೆ, ದಟ್ಟವಾದ ಕಾಡಿನ ಲಾಭ ಪಡೆದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಶೆಲ್ ದಾಳಿ ನಡೆಸಿದೆ. ಗುರುವಾರ ಬೆಳಗಿನ ಜಾವದ ವರೆಗೂ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಇಬ್ಬರ ಪೈಕಿ ಓರ್ವ ಉಗ್ರನ ಶವವನ್ನು ಭದ್ರತಾ ಸಿಬ್ಬಂದಿ ವಶಪಡಸಿಕೊಂಡಿದೆ. ಈ ವೇಳೆ, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ ಎಂದು ಕರ್ನಲ್ ಸುನಿಲ್ ಬರ್ತ್ವಾಲ್ ತಿಳಿಸಿದ್ದಾರೆ.
ಗಡಿ ಪ್ರದೇಶಗಳಲ್ಲಿ ಒಳನುಸುಳುವಿಕೆ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದು, ಪೂಂಚನ 12 ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿ ನಿರಂತರ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜುಲೈ 31ರಂದು ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಭಾರತೀಯ ಗಡಿ ಭದ್ರತಾ ಪಡೆಯು ಪಾಕಿಸ್ತಾನದಿಂದ ಭಾರತದ ಗಡಿಯತ್ತ ನುಸುಳುತ್ತಿದ್ದ ಪಾಕ್ ವ್ಯಕ್ತಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.
ಮೂವರು ಯೋಧರು ಹುತಾತ್ಮ: ಕೆಲ ದಿನಗಳ ಹಿಂದಷ್ಟೆ ದಕ್ಷಿಣ ಕಾಶ್ಮೀರದಲ್ಲಿ ಉಗ್ರರು ಗುಂಡಿನ ದಾಳಿಗೆ ಮೂವರು ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಹಾಲನ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅವಿತ್ತಿದ್ದ ವೇಳೆ ಭದ್ರತಾ ಪಡೆಗಳು ಅರಣ್ಯ ಪ್ರದೇಶವನ್ನು ಸುತ್ತುವರಿದು ಶೊಧ ಕಾರ್ಯಾಚರಣೆ ಕೈಗೊಂಡಿದ್ದರು.
ಈ ವೇಳೆ ಅಡಗಿ ಕುಳಿತಿದ್ದ ಉಗ್ರರು ಸೇನಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಎನ್ಕೌಂಟರ್ ಆರಂಭಿಸಿದ ಸೇನಾ ಸಿಬ್ಬಂದಿ ಮೇಲೆ ಅವಿತುಕುಳಿತ ಉಗ್ರರು ಮನಸೋ ಇಚ್ಚೆ ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ಚಕಮಕಿಯಲ್ಲಿ ಉಗ್ರರ ದಾಳಿಯಿಂದ ಮೂವರು ಭದ್ರಾತಾ ಪಡೆ ಸಿಬ್ಬಂದಿ ಗಂಭೀರವಾಗಿ ಗಾಯ ಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೂವರು ಸಾವನ್ನಪ್ಪಿದ್ದರು.