ಚೆನ್ನೈ (ತಮಿಳುನಾಡು) : ಬಿಜೆಪಿಯ ತೀವ್ರ ಪೈಪೋಟಿಯ ನಡುವೆಯೂ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೇರಿದ್ದು ಈಗ ಇತಿಹಾಸ. ರಾಜ್ಯದ ಚುನಾವಣೆಯ ಹಿಂದೆ ಪಕ್ಕದ ತಮಿಳುನಾಡಿನ ಮಾಜಿ ಪ್ರಭಾವಿ ಅಧಿಕಾರಿಗಳೂ ತೆರೆಮರೆಯಲ್ಲಿ ಕೆಲಸ ಮಾಡಿದ್ದರು ಎಂಬುದು ವಿಶೇಷ. ಇದರಲ್ಲಿ ಒಬ್ಬರು ಗೆಲುವಿನ ಸಂಭ್ರಮದಲ್ಲಿದ್ದರೆ, ಇನ್ನೊಬ್ಬರು ಸೋಲಿನ ಕಹಿ ಅನುಭವಿಸಿದರು.
ಆ ಮಾಜಿ ಅಧಿಕಾರಿಗಳು ಬೇರಾರೂ ಅಲ್ಲ, ಕರ್ನಾಟಕ ಕೇಡರ್ನ ಐಎಎಸ್, ಐಪಿಎಸ್ ಅಧಿಕಾರಿಗಳಾದ ಸಸಿಕಾಂತ್ ಸೆಂಥಿಲ್ ಮತ್ತು ಅಣ್ಣಾಮಲೈ. ಸಸಿಕಾಂತ್ ಸೆಂಥಿಲ್ ಅವರು ಇದೀಗ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದರೆ, 'ಕರ್ನಾಟಕದ ಸಿಂಗಂ' ಎಂದೇ ಖ್ಯಾತಿ ಪಡೆದಿದ್ದ ಅಣ್ಣಾಮಲೈ ಅವರು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾರೆ.
ಇಬ್ಬರೂ ಅಧಿಕಾರಿಗಳಾಗಿ ಕರ್ನಾಟಕದಲ್ಲಿ ಕೆಲಸ ಮಾಡಿದ್ದರು. ಐಎಎಸ್ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅಣ್ಣಾಮಲೈ ಅವರು ಐಪಿಎಸ್ ಅಧಿಕಾರಿಯಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಕಾನೂನು ಪಾಲನೆ ಕಾರ್ಯ ಮಾಡಿದ್ದಾರೆ. ಇಬ್ಬರೂ ಅಧಿಕಾರಿಗಳು ಹುದ್ದೆಯಿಂದ ವಿಮುಕ್ತರಾಗಿದ್ದು, ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾಂಗ್ರೆಸ್ ವಾರ್ ರೂಂನಲ್ಲಿ ಸೆಂಥಿಲ್: ಐಎಎಸ್ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಕಾಂಗ್ರೆಸ್ನ ವಾರ್ ರೂಂ ಮುಖ್ಯಸ್ಥರಾಗಿದ್ದ ಅವರು, ತಂಡವನ್ನು ಕಟ್ಟಿಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಸಾಂಘಿಕ ಹೋರಾಟ ನಡೆಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಸರ್ಕಾರದ ವಿರುದ್ಧವಾದ ವಿಷಯಗಳನ್ನು ಹರಡಿ ಪಕ್ಷಕ್ಕೆ ಬಲ ತುಂಬಿದ್ದರು.
ಕಾಂಗ್ರೆಸ್ ವಾರ್ ರೂಂನಲ್ಲಿ ತಮಿಳುನಾಡು ಮತ್ತು ನಾಗ್ಪುರದ 50 ಕ್ಕೂ ಅಧಿಕ ಯುವಕರ ತಂಡವನ್ನು ಸೆಂಥಿಲ್ ಕಟ್ಟಿಕೊಂಡಿದ್ದರು. ಇವರ ಮೂಲಕ ಸರ್ಕಾರದ ವೈಫಲ್ಯ, 40 ಪರ್ಸೆಂಟ್ ಕಮಿಷನ್, ಸಿಎಂ ಬೊಮ್ಮಾಯಿ ಅವರ ಚಿತ್ರವಿರುವ ಪೇಸಿಎಂ ಅಭಿಯಾನಗಳನ್ನು ನಡೆಸಿ ಬಿಜೆಪಿ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ನಡೆಸಿ ಜನರ ಮನಸ್ಸು ಮುಟ್ಟಿದರು. ಕೊನೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಪಕ್ಷ ಏಕಮೇವವಾಗಿ ಅಧಿಕಾರಕ್ಕೇರಿದೆ. ಇದರಿಂದ ಸೆಂಥಿಲ್ ಅವರ ಕಾರ್ಯ ಸಾರ್ಥಕವಾಗಿದೆ.
ಅಣ್ಣಾಮಲೈಗೆ ಸೋಲಿನ ಕಹಿ: ಇತ್ತ, ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ (38) ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಇದೀಗ ತಮಿಳುನಾಡು ರಾಜ್ಯದ ಅಧ್ಯಕ್ಷರಾಗಿರುವ ಅವರು, ಕರ್ನಾಟಕ ಚುನಾವಣಾ ಸ್ಟಾರ್ ಪ್ರಚಾರಕರೂ ಆಗಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋನಲ್ಲಿ ಭಾಗಿಯಾಗಿ ಜನರ ನಮನ ಸೆಳೆದರು. ಗಮನಾರ್ಹವಾಗಿ ಅವರು ತಮಿಳು ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳಲ್ಲಿ ಹೆಚ್ಚು ಒತ್ತು ನೀಡಿದರು.
ಆದಾಗ್ಯೂ, ರಾಜ್ಯದಲ್ಲಿ ಬಿಜೆಪಿ ಸೋಲು ಕಂಡಿತು. ಜನಮಾನಸದಲ್ಲಿ ಹೆಸರಾಗಿರುವ ಅಣ್ಣಾಮಲೈ ಅವರ ಖ್ಯಾತಿ ರಾಜ್ಯದಲ್ಲಿ ಯಾವುದೇ ಕೆಲಸ ಮಾಡಿಲ್ಲ. ಚುನಾವಣೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಅವರ ನಿರೀಕ್ಷೆಯು ಹುಸಿಯಾಯಿತು. ಮಾಧ್ಯಮ ಸಂವಾದವೊಂದರಲ್ಲಿ ಅಣ್ಣಾಮಲೈ ಅವರು, "ಗೆಲುವು ಮತ್ತು ಸೋಲು ಪ್ರಜಾಪ್ರಭುತ್ವದ ಭಾಗವಾಗಿದೆ. ಯಶಸ್ಸಿಗೆ ಅನೇಕರು, ಸೋಲು ಎಂದಿಗೂ ಅನಾಥ" ಎಂದು ಹೇಳಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ ಸಿಎಂ ಪಟ್ಟ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್; 20ಕ್ಕೆ ಪ್ರಮಾಣ ವಚನ