ಖರಗ್‌ಪುರ (ಪಶ್ಚಿಮ ಬಂಗಾಳ): ಕ್ಯಾಂಪಸ್ ಸಂದರ್ಶನದಲ್ಲಿ ಪಶ್ಚಿಮ ಬಂಗಾಳದ ಖರಗ್ಪುರದಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಇಬ್ಬರು ವಿದ್ಯಾರ್ಥಿಗಳು ವಾರ್ಷಿಕ 2 ಕೋಟಿ ರೂಪಾಯಿಗೂ ಹೆಚ್ಚು ವೇತನದ ಆಫರ್‌ಗಳನ್ನು ಪಡೆದಿದ್ದಾರೆ.
ಐಐಟಿ ಖರಗ್‌ಪುರದಲ್ಲಿ ಡಿಸೆಂಬರ್ 1ರಿಂದ ಕ್ಯಾಂಪಸ್ ಸಂದರ್ಶನ ಆರಂಭವಾಗಿದೆ. ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳು ಇದರಲ್ಲಿ ಭಾಗವಹಿಸಿದ್ದು, ಮೊದಲ ದಿನದಲ್ಲಿ ಒಟ್ಟು 760 ವಿದ್ಯಾರ್ಥಿಗಳು ಹಲವು ಕಂಪನಿಗಳಿಂದ ಪ್ರಿ-ಪ್ಲೇಸ್‌ಮೆಂಟ್ ಆಫರ್‌ಗಳನ್ನು ಪಡೆದಿದ್ದಾರೆ. ಅಲ್ಲದೇ, ಅಂತಿಮ ವರ್ಷದ 800ಕ್ಕೂ ವಿದ್ಯಾರ್ಥಿಗಳಿಗೆ ಹೆಚ್ಚು ಇಂಟರ್ನ್‌ಶಿಪ್ ಆಫರ್‌ಗಳನ್ನು ನೀಡಲಾಗಿದೆ.
ಈ ಪೈಕಿ ಇಬ್ಬರಿಗೆ 2 ಕೋಟಿ ರೂ.ಗೂ ಅಧಿಕ ಸಂಬಳದ ಕೆಲಸ ನೀಡಲಾಗಿದೆ. ಅದರಲ್ಲೂ ಒಬ್ಬ ವಿದ್ಯಾರ್ಥಿಗೆ ಅಂತಾರಾಷ್ಟ್ರೀಯ ಸಂಸ್ಥೆಯಿಂದ ವಾರ್ಷಿಕ 2.60 ಕೋಟಿ ರೂ.ಗಳ ವೇತನದ ಆಫರ್ ಬಂದಿದೆ ಎಂದು ವರದಿಯಾಗಿದೆ. ಈ ಕ್ಯಾಂಪಸ್ ಸಂದರ್ಶನದ ಮೂಲಕ ಸಾಫ್ಟ್‌ವೇರ್ ಎಂಜಿನಿಯರಿಂಗ್, ಅನಾಲಿಟಿಕ್ಸ್, ಕನ್ಸಲ್ಟಿಂಗ್, ಫೈನಾನ್ಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸಲಾಗಿದೆ.
ಆ್ಯಪಲ್, ಏರ್‌ಬಸ್, ಆಲ್ಫಾಗ್ರಿಪ್, ಕ್ಯಾಪಿಟಲ್ ಒನ್, ಎಕ್ಸ್‌ಎಲ್ ಸರ್ವಿಸಸ್, ಗೂಗಲ್, ಗ್ರಾವಿಟನ್, ಮೈಕ್ರೋಸಾಫ್ಟ್, ರೂಬ್ರಿಕ್, ಸ್ಕ್ವೇರ್ ಪಾಯಿಂಟ್ ಸೇರಿದಂತೆ ಒಟ್ಟು 34 ಅಂತಾರಾಷ್ಟ್ರೀಯ ಕಂಪನಿಗಳು ಐಐಟಿ ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಭಾಗವಹಿಸಿವೆ. ಹಲವಾರು ವಿದ್ಯಾರ್ಥಿಗಳು ಪ್ರಿ-ಪ್ಲೇಸ್‌ಮೆಂಟ್ ಆಫರ್‌ಗಳನ್ನು ಪಡೆದಿದ್ದಾರೆ ಎಂದು ಐಐಟಿ ಖರಗ್‌ಪುರ ಕೆರಿಯರ್ ಡೆವಲಪ್‌ಮೆಂಟ್ ಸೆಂಟರ್ ಚೇರ್ಮನ್ ಎ.ರಾಜ್‌ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಆರೋಪಿಗಳ ವಿಚಾರಣೆ.. ಮಾನವ ಹಕ್ಕುಗಳ ಉಲ್ಲಂಘನೆ ತಪ್ಪಿಸಲು ಅಮೆರಿಕ, ನೆದರ್ಲೆಂಡ್ ಪೊಲೀಸರಿಂದ ತರಬೇತಿ