ಭಿವಂಡಿ (ಮಹಾರಾಷ್ಟ್ರ): ಎರಡು ಅಂತಸ್ತಿನ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದು 8 ತಿಂಗಳ ಮಗು ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಭಿವಂಡಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಅಗ್ನಿಶಾಮಕ ದಳ, ವಿಪತ್ತು ಸ್ಪಂದನಾ ಪಡೆ ಘಟನಾ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಧಿಕೃತ ಸುದ್ದಿಮೂಲಗಳ ಪ್ರಕಾರ, ಗೌರಿಪಾದ ಸಾಹಿಲ್ ಹೋಟೆಲ್ ಪ್ರದೇಶದಲ್ಲಿರುವ ಕಟ್ಟಡದ ಒಂದು ಭಾಗ ಕುಸಿದಿದೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಸಿದು ಬಿದ್ದ ಅಬ್ದುಲ್ ಬಾರಿ ಜನಾಬ್ ಎಂಬ ಹೆಸರಿನ ಕಟ್ಟಡ ಅಂದಾಜು 40 ವರ್ಷಗಳಷ್ಟು ಹಳೆಯದ್ದು ಎಂದು ತಿಳಿದುಬಂದಿದೆ. ನೆಲ ಅಂತಸ್ತಿನಲ್ಲಿ ಮಗ್ಗದ ಕಾರ್ಖಾನೆ ಇದೆ. ಇದರ ಮೇಲಿನ ಎರಡು ಅಂತಸ್ತುಗಳಲ್ಲಿ ಜನರು ವಾಸವಿದ್ದರು. ಮಧ್ಯರಾತ್ರಿ ದಿಢೀರ್ ಹಿಂಬದಿಯ ಮೇಲ್ಛಾವಣಿ ಕುಸಿದಿದೆ. ಪರಿಣಾಮ ಮೊದಲ ಮಹಡಿಯಲ್ಲಿದ್ದ ಕುಟುಂಬ ಅವಶೇಷಗಳಡಿ ಸಿಲುಕಿತ್ತು. ಸ್ಥಳೀಯರ ಸಹಾಯದಿಂದ ಅವಶೇಷಗಳಡಿಯಲ್ಲಿ ಸಿಲುಕಿದ್ದ ಒಟ್ಟು 7 ಮಂದಿಯನ್ನು ಹೊರತೆಗೆಯಲಾಗಿದೆ. ತಕ್ಷಣಕ್ಕೆ ಆಂಬ್ಯುಲೆನ್ಸ್ ಲಭ್ಯವಿರದ ಕಾರಣ ಗಾಯಾಳುಗಳನ್ನು ರಿಕ್ಷಾದಲ್ಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವಶೇಷಗಳನ್ನು ಹೊರತೆಗೆಯುವ ಕಾರ್ಯ ಮುಂದುವರೆದಿದೆ ಎಂದು ಅಗ್ನಿಶಾಮಕ ಅಧಿಕಾರಿ ಸುಧಾಕರ ಪವಾರ್ ತಿಳಿಸಿದರು.
ಜುನಾಗಢ್ನಲ್ಲಿ ಕಟ್ಟಡ ಕುಸಿತ: ಗುಜರಾತ್‌ನ ಜುನಾಗಢದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ನಾಲ್ವರು ಸಾವನ್ನಪ್ಪಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ 40 ವರ್ಷದ ಹಳೆಯ ಶಿಥಿಲ ಕಟ್ಟಡ ಕುಸಿದು ಬಿದ್ದಿತ್ತು. ಘಟನೆಯಲ್ಲಿ ಸಾವನ್ನಪ್ಪಿದ ನಾಲ್ವರಲ್ಲಿ ಮೂವರು ಒಂದೇ ಕುಟುಂಬದವರಾಗಿದ್ದರು.
ಪಶ್ಚಿಮ ಅಂಬರನಾಥದಲ್ಲಿ ಮೇಲ್ಛಾವಣಿ ಕುಸಿದು ಮಹಿಳೆ ಸಾವು: ಪಶ್ಚಿಮ ಅಂಬರನಾಥದಲ್ಲಿ ಫಾತಿಮಾ ಶಾಲೆ ಬಳಿ ಅಣ್ಣಾ ಅಪಾರ್ಟ್ಮೆಂಟ್ ಎಂಬ ಹಳೆಯ ಕಟ್ಟಡದ ನಾಲ್ಕನೇ ಮಹಡಿಯ ಚಾವಣಿ ಕುಸಿದಿತ್ತು. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದರು.
ಮಥುರಾದಲ್ಲಿ ಕಟ್ಟಡ ಕುಸಿದು 5 ಸಾವು: ಹಳೆಯ ಕಟ್ಟಡ ಕುಸಿದುಬಿದ್ದು ಐವರು ಮೃತಪಟ್ಟು, ಹಲವರು ಗಾಯಗೊಂಡ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ಆಗಸ್ಟ್‌ನಲ್ಲಿ ನಡೆದಿತ್ತು. ಮಥುರಾ ವೃಂದಾವನ ಸಮೀಪದ ಬಂಕೆ ಬಿಹಾರಿ ದೇವಸ್ಥಾನದಿಂದ ಕೇವಲ 200 ಮೀಟರ್ ದೂರದಲ್ಲಿ ಹಳೆಯ ಕಟ್ಟಡ ದಿಢೀರ್ ಕುಸಿದು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದರು. ಘಟನೆಯಲ್ಲಿ ಸಾವನ್ನಪ್ಪಿದ್ದವರನ್ನು ಕಾನ್ಪುರ ನಿವಾಸಿಗಳಾದ ಗೀತಾ ಕಶ್ಯಪ್, ಅರವಿಂದ್ ಕುಮಾರ್, ರಶ್ಮಿ ಗುಪ್ತಾ ಹಾಗೂ ಸ್ಥಳೀಯ ನಿವಾಸಿ ಅಂಜು ಮುಗಿ ಎಂದು ಗುರುತಿಸಲಾಗಿತ್ತು.
ಇದನ್ನೂ ಓದಿ: Balasore train tragedy: ಒಡಿಶಾ ತ್ರಿವಳಿ ರೈಲು ದುರಂತ.. ರೈಲ್ವೆ ಇಲಾಖೆಯ ಮೂವರು ಅಧಿಕಾರಿಗಳ ವಿರುದ್ಧ ಸಿಬಿಐ ಚಾರ್ಜ್ ಶೀಟ್