ವಿಜಯವಾಡ(ಆಂಧ್ರಪ್ರದೇಶ): ನಗರದ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿದ್ದ ಬಸ್ ಡಿಢೀರ್ ಪ್ರಯಾಣಿಕರ ಮೇಲೆ ನುಗ್ಗಿದೆ. ಅವಘಡದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಬಸ್ ಚಕ್ರದಡಿ ಸಿಲುಕಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬ್ರೇಕ್ ವೈಫಲ್ಯದಿಂದ ಘಟನೆ ನಡೆದಿದೆ ಎನ್ನಲಾಗ್ತಿದೆ.
ವಿಜಯವಾಡ ಪಂಡಿತ್ ನೆಹರು ಬಸ್ ನಿಲ್ದಾಣದಲ್ಲಿ ಆರ್ಟಿಸಿ ಬಸ್ ಅಪಘಾತಕ್ಕೀಡಾಗಿದ್ದು, ಪ್ರಯಾಣಿಕರು ಬೆಚ್ಚಿ ಬೀಳುವಂತೆ ಮಾಡಿದೆ. ಆಟೋನಗರ ಡಿಪೋಗೆ ಸೇರಿದ ಬಸ್ ಗುಂಟೂರಿಗೆ ಹೋಗಲು ಬಸ್ ನಿಲ್ದಾಣಕ್ಕೆ ಬರುತ್ತಿತ್ತು. ಅತಿವೇಗದಲ್ಲಿ ಬಂದ ಬಸ್ ಪ್ಲಾಟ್‌ಫಾರ್ಮ್‌ನಲ್ಲಿದ್ದ ಪ್ರಯಾಣಿಕರ ಮೇಲೆ ನುಗ್ಗಿದ್ದು, ಚಕ್ರದಡಿ ಸಿಲುಕಿ ಮೂವರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಮಹಿಳೆ, ಮಗು ಸೇರಿದಂತೆ ಕಂಡಕ್ಟರ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಮಗುವಿನ ಪೋಷಕರ ರೋದನ ಮುಗಿಲು ಮುಟ್ಟಿದೆ.
ಬಸ್ ನುಗ್ಗಿದ ರಭಸಕ್ಕೆ ಅಲ್ಲಿದ್ದ ಸ್ಟೀಲ್ ಬ್ಯಾರಿಕೇಡ್‌ಗಳು, ಕುರ್ಚಿಗಳು ಧ್ವಂಸಗೊಂಡಿವೆ. ಅಂಗಡಿಗಳಿಗೂ ನುಗ್ಗಿದ್ದರಿಂದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಬ್ರೇಕ್ ಹಾಕದ ಕಾರಣ ಬಸ್ ಡಿಕ್ಕಿ ಹೊಡೆದಿದೆ ಎನ್ನುತ್ತಾರೆ ಅಂಗಡಿ ಮಾಲೀಕರು. "ಬಸ್ಸಿನ ಎಕ್ಸಲೇಟರ್ ಜಾಮ್ ಆಗಿತ್ತು. ನಾನು ರಿವರ್ಸ್ ಗೇರ್ ಹಾಕಿ ಮೂವ್ ಮಾಡಿದೆ. ಆದ್ರೆ ಬಸ್ ಮುಂದಕ್ಕೆ ಸಾಗಿತು. ಮುಂದೆ ಏನಾಗುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ. ಬಸ್‌ಗೆ ಮೊದಲಿನಿಂದಲೇ ಈ ಸಮಸ್ಯೆ ಇತ್ತು" ಎಂದು ಅಪಘಾತಕ್ಕೀಡಾದ ಬಸ್ ಚಾಲಕ ಹೇಳಿದರು.
ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದರು. ಅಪಘಾತದ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಅಪಘಾತ ಹೇಗೆ ಸಂಭವಿಸಿತು ಎಂಬ ಬಗ್ಗೆ ಪ್ರತ್ಯಕ್ಷದರ್ಶಿಗಳನ್ನು ಕೇಳಲಾಗುತ್ತಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಕಾಲುವೆಗೆ ನುಗ್ಗಿ ಶಾಲಾ ಬಸ್ ಪಲ್ಟಿ: ಕೃಷ್ಣಾ ಜಿಲ್ಲೆಯಲ್ಲಿ ಶಾಲಾ ವಾಹನವೊಂದು ಕಾಲುವೆಗೆ ನುಗ್ಗಿ ಪಲ್ಟಿಯಾಗಿದೆ. ಸ್ಟೇರಿಂಗ್ ರಾಡ್ ತುಂಡಾಗಿ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಜಿಲ್ಲೆಯ ಅವನಿಗಡ್ಡಾದ ಖಾಸಗಿ ಶಾಲೆಯೊಂದಕ್ಕೆ ಸೇರಿದ ಬಸ್ ಕೋಡೂರು ತಾಲೂಕಿನ ವಿಶ್ವನಾಥಪಲ್ಲಿ ಬಳಿ ನಿಯಂತ್ರಣ ತಪ್ಪಿ ಕಾಲುವೆಗೆ ನುಗ್ಗಿತ್ತು. ವಿದ್ಯಾರ್ಥಿಗಳಿಗೆ ಯಾವುದೇ ಗಾಯಗಳಾಗಿಲ್ಲ. ಅವನಿಗಡ್ಡದಿಂದ ಕೋಡೂರಿನವರೆಗಿನ ರಸ್ತೆ ದುರಸ್ತಿಯಲ್ಲಿರುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತಾರೆ ಪ್ರಯಾಣಿಕರು. ಘಟನೆಯ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಇದನ್ನೂ ಓದಿ: ತಡೆಗೋಡೆಗೆ ಡಿಕ್ಕಿ ಹೊಡೆದು ರೈಲ್ವೇ ಟ್ರ್ಯಾಕ್‌ಗೆ ಬಿದ್ದ ಬಸ್: ರಾಜಸ್ತಾನದಲ್ಲಿ ನಾಲ್ವರು ಸಾವು, 24 ಮಂದಿಗೆ ಗಾಯ