ಕಂಕೇರ್ (ಛತ್ತೀಸ್‌ಗಢ): ಛತ್ತೀಸ್ಗಢದಲ್ಲಿ ನಾಳೆ ಮೊದಲ ಹಂತದ ಮತದಾನ ನಡೆಯಲಿದ್ದು, ಒಂದು ದಿನ ಮೊದಲು ಮಾವೋವಾದಿಗಳು ಅಟ್ಟಹಾಸ ಮೆರೆದಿದ್ದಾರೆ. ಕಂಕೇರ್ ಜಿಲ್ಲೆಯಲ್ಲಿ ಸೋಮವಾರ ಐಇಡಿ ಸ್ಫೋಟವಾಗಿ ಇಬ್ಬರು ಚುನಾವಣಾ ಸಿಬ್ಬಂದಿ ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರೊಬ್ಬರು ಗಾಯಗೊಂಡಿದ್ದಾರೆ.
ಛೋಟೆಬೆಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ನಾಲ್ಕು ಮತಗಟ್ಟೆಗಳಿಗೆ ಭದ್ರತಾ ಸಿಬ್ಬಂದಿಯ ಬೆಂಗಾವಲಿನಲ್ಲಿ ಚುನಾವಣಾಧಿಕಾರಿಗಳು ತೆರಳುತ್ತಿದ್ದಾಗ ಮಧ್ಯಾಹ್ನ 3.30 ರ ಸುಮಾರಿಗೆ ಮಾವೋವಾದಿಗಳು ಐಇಡಿ ಸ್ಫೋಟ ಮಾಡಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಮಧ್ಯಾಹ್ನ ಬಿಎಸ್‌ಎಫ್ ಸಿಬ್ಬಂದಿ ಸಮೇತ ಚುನಾವಣಾಧಿಕಾರಿಗಳ ತಂಡವು ಮತಗಟ್ಟೆಗಳಿಗೆ ತೆರಳುತ್ತಿದ್ದರು. ಈ ವೇಳೆ ಮಾವೋವಾದಿಗಳು ಮೂರು ಐಇಡಿಗಳನ್ನು ರೆಂಗಾವಾಹಿ ಎಂಬಲ್ಲಿ ಸ್ಫೋಟಿಸಿದರು. ಮತಗಟ್ಟೆಯಿಂದ 1500 ಮೀ. ದೂರದಲ್ಲಿರುವ ರೋಡ್‌ಪಾರಾ ಮತ್ತು ರೆಂಗಾವಾಹಿ ನಡುವೆ ಈ ಸ್ಫೋಟವಾಗಿದೆ. ಘಟನೆಯಲ್ಲಿ ಬಿಎಸ್‌ಎಫ್ ಯೋಧನೊಬ್ಬನ ಎರಡೂ ಕಾಲುಗಳಿಗೆ ಗಾಯಗಳಾಗಿವೆ. ಇಬ್ಬರು ಮತಗಟ್ಟೆ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಾಳೆ ಮತದಾನ: ಛತ್ತೀಸ್‌ಗಢ ಮಾವೋವಾದಿ ಚಟುವಟಿಕೆಗಳಿಗೆ ಕುಖ್ಯಾತಿ. ಇಲ್ಲಿನ ಹಲವು ಪ್ರದೇಶಗಳಲ್ಲಿ ಈಗಲೂ ನಕ್ಸಲರು ಸಕ್ರಿಯರಾಗಿದ್ದಾರೆ. ನಾಳೆ (ನವೆಂಬರ್ 7) 20 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. ಇವುಗಳಲ್ಲಿ ಹೆಚ್ಚಿನವು ನಕ್ಸಲರ ಉಪಟಳದ ಪ್ರದೇಶಗಳಲ್ಲಿವೆ. ಹೀಗಾಗಿ ಸರ್ಕಾರ ಮತ್ತು ಚುನಾವಣಾ ಆಯೋಗ ಬಿಗಿ ಭದ್ರತೆ ಮಾಡಿದೆ. ಆದಾಗ್ಯೂ ಇಂದು ಐಇಡಿ ಸ್ಫೋಟ ದುರ್ಘಟನೆ ನಡೆದಿದೆ.
ಅಂತಗಢ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೆಂಗಗೊಂಡಿ ಮತಗಟ್ಟೆಗೆ ಅಧಿಕಾರಿಗಳನ್ನು ಸುರಕ್ಷಿತವಾಗಿ ಕರೆದೊಯ್ಯಲಾಗಿದೆ. ಸ್ಫೋಟದ ಬಳಿಕ ಈ ಪ್ರದೇಶದಲ್ಲಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. 20 ಕ್ಷೇತ್ರಗಳ ಪೈಕಿ ಅಂತಗಢ ಕ್ಷೇತ್ರವೂ ಸೇರಿದ್ದು, ಮೊದಲ ಹಂತದ ಚುನಾವಣೆಗೆ ಮಂಗಳವಾರ ಮತದಾನ ನಡೆಯಲಿದೆ. ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಬಂದು ಹಕ್ಕು ಚಲಾಯಿಸಬೇಕು. ನಕ್ಸಲರ ಬೆದರಿಕೆ ಹೆದರುವ ಅಗತ್ಯವಿಲ್ಲ ಎಂದು ಅಲ್ಲಿನ ಸರ್ಕಾರ ಕೋರಿದೆ.
ಛತ್ತೀಸ್‌ಗಢ ವಿಧಾನಸಭೆಯ 90 ಸ್ಥಾನಗಳ ಪೈಕಿ 20 ಕ್ಷೇತ್ರಗಳಿಗೆ ನವೆಂಬರ್ 7 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಉಳಿದ 70 ಕ್ಷೇತ್ರಗಳಿಗೆ ನವೆಂಬರ್ 17 ರಂದು ಮತದಾನ ಜರುಗಲಿದೆ. ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಛತ್ತೀಸ್‌ಗಢ ಚುನಾವಣೆ: ನಕ್ಸಲ್ ಪೀಡಿತ 20 ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಕಣ್ಣು, ಕಾರ್ಯಕರ್ತರಿಗೆ ಹೊಸ ಟಾಸ್ಕ್!