ಮುಜಾಫರ್ ನಗರ (ಉತ್ತರ ಪ್ರದೇಶ): ಇಲ್ಲಿನ ಶಮ್ಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಎರಡು ನವಜಾತ ಶಿಶುಗಳು ಚಳಿಯಿಂದ ಸಾವನ್ನಪ್ಪಿರುವ ಆತಂಕಕಾರಿ ಘಟನೆ ನಡೆದಿದೆ. ಈ ಪ್ರಕರಣ ಸಂಬಂಧ ಇಬ್ಬರು ವೈದ್ಯರನ್ನು ಕೂಡ ಬಂಧಿಸಲಾಗಿದೆ.
ನವಜಾತ ಶಿಶುಗಳ ಕುಟುಂಬಸ್ಥರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಆಸ್ಪತ್ರೆಯ ಮಾಲೀಕರಾದ ಡಾ ನೀತು ಶನಿವಾರ ರಾತ್ರಿ ಉತ್ತಮ ನಿದ್ದೆ ಮಾಡುವುದಕ್ಕೋಸ್ಕರ ಎಸಿ ಆನ್ ಮಾಡಿದ್ದಾರೆ. ಇದರಿಂದಾಗಿ ಶಿಶುಗಳು ಮರುದಿನ ಬೆಳಗ್ಗೆ ಸಾವನ್ನಪ್ಪಿವೆ ಎಂದು ದೂರಿದ್ದಾರೆ.
ಈ ಕುರಿತು ಮಾತನಾಡಿರುವ ಕೈರಾನಾ ಎಸ್ಎಚ್ಒ ನೇತ್ರಪಾಲ್ ಸಿಂಗ್, ಪೋಷಕರ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 204ರ ಅಡಿ ಪ್ರಕರಣ ದಾಖಲು ಮಾಡಲಾಗಿದ್ದು, ಅವರನ್ನು ಬಂಧಿಸಲಾಗಿದೆ. ಈ ನಡುವೆ ಆರೋಗ್ಯ ಇಲಾಖೆ ಕೂಡ ಈ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿದೆ ಎಂದರು. ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಅಶ್ವನಿ ಶರ್ಮಾ ಮಾತನಾಡಿ, ಈ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಕೈರಾನಾದ ಸರ್ಕಾರಿ ಪ್ರಾಥಾಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ತಾಯಿ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅದೇ ದಿನ ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಕ್ಕಳನ್ನು ಚಿಕಿತ್ಸೆಗಾಗಿ ಫೋಟೋಥೆರಪಿ ಘಟಕದಲ್ಲಿ ಇರಿಸಲಾಗಿದೆ. ಶನಿವಾರ ರಾತ್ರಿ ಮಲಗಲು ಬಂದ ಡಾ. ನೀತು ಎಸಿಯನ್ನು ಆನ್ ಮಾಡಿದ್ದಾರೆ. ಇದರ ಪರಿಣಾಮ ಕಂದಮ್ಮಗಳು ಇಡೀ ರಾತ್ರಿ ಚಳಿ ತಾಳಲಾರದೇ ಸಾವನ್ನಪ್ಪಿವೆ. ಮರುದಿನ ಅಂದರೆ ಭಾನುವಾರ ಬೆಳಗ್ಗೆ ಘಟಕಕ್ಕೆ ಪೋಷಕರು ಮಕ್ಕಳನ್ನು ನೋಡಲು ಹೋದಾಗ ಅವು ಸಾವನ್ನಪ್ಪಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪ್ರಕರಣ ಸಂಬಂಧ ಮಗುವಿನ ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದು,ಡಾ. ನೀತು ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹೆಚ್ಚುತ್ತಲೇ ಇದೆ ಶಿಶು ಮರಣ ಸಂಖ್ಯೆ: ವಿಶ್ವಸಂಸ್ಥೆಯ ವರದಿಯ ಪ್ರಕಾರ, ವಾರ್ಷಿಕವಾಗಿ 4.5 ಮಿಲಿಯನ್ ಮಕ್ಕಳು ಮತ್ತು ಶಿಶುಗಳು ಹೆರಿಗೆಯ ಸಮಯದಲ್ಲಿ ಅಥವಾ ಹೆರಿಗೆಯ ನಂತರದ ಮೊದಲ ವಾರದಲ್ಲಿ ಸಾಯುತ್ತವೆ. ಅಂದರೆ ಪ್ರತಿ ಏಳು ಸೆಕೆಂಡಿಗೆ ತಾಯಿ ಅಥವಾ ನವಜಾತ ಮಗು ಸಾಯುತ್ತಾರೆ. ಸೆಪ್ಸಿಸ್, ಮೆನಿಂಜೈಟಿಸ್, ನ್ಯುಮೋನಿಯಾ, ನವಜಾತ ಟೆಟನಸ್‌ನಂತಹ ಆರೋಗ್ಯ ಸಮಸ್ಯೆ ಸೇರಿದಂತೆ ವೈದ್ಯರ ಚಿಕಿತ್ಸೆ ಅಲಭ್ಯತೆ, ಹೆರಿಯ ಸಮಯದಲ್ಲಿ ಆಮ್ಲಜನಕದ ಪೂರೈಕೆ ಸೇರಿದಂತೆ ಹಲವು ಕಾರಣಗಳು ಸಾವಿಗೆ ಪ್ರಮುಖ ಕಾರಣವಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ಏಳು ಸೆಕೆಂಡಿಗೆ ಒಂದು ನವಜಾತ ಶಿಶುಗಳು ಸಾವನ್ನಪ್ಪುತ್ತಿದೆ. (ಐಎಎನ್ಎಸ್)
ಇದನ್ನೂ ಓದಿ: ಭಾರತದಲ್ಲಿ ತಾಯಂದಿರ ಸಾವಿಗೆ ಕಾರಣವಾಗುತ್ತಿದೆ ಪ್ರಸವಪೂರ್ವ ರಕ್ತಸ್ರಾವ