ಪೆದ್ದಪಲ್ಲಿ (ತೆಲಂಗಾಣ): ರಸ್ತೆ ಅಪಘಾತದಲ್ಲಿ ಇಬ್ಬರು ಚಿನ್ನದ ವ್ಯಾಪಾರಿಗಳು ಸಾವನ್ನಪ್ಪಿ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೆದ್ದಪಲ್ಲಿ ಜಿಲ್ಲೆಯ ರಾಮಗುಂಡಂ ಎನ್ಟಿಪಿಸಿ ಬಳಿಯಿರುವ ಮಲ್ಯಾಲಪಲ್ಲಿ ರೈಲ್ವೆ ಸೇತುವೆ ಬಳಿ ನಡೆದಿದೆ.
ವೇಗದ ಚಾಲನೆಯಿಂದ ಕಾರು ಉರುಳಿ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಕರೀಂನಗರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅವರಿಬ್ಬರ ಸ್ಥಿತಿಯೂ ಗಂಭೀರವಾಗಿದೆ .
ಕಾರಿನಲ್ಲಿದ್ದ ಸುಮಾರು ಒಂದೂವರೆ ಕೆಜಿ ಚಿನ್ನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕಾರಿನಲ್ಲಿ ಚಿನ್ನದ ಜೊತೆ 10 ಬ್ಯಾಗ್ಗಳಲ್ಲಿ ಪುಸ್ತಕಗಳು ಪತ್ತೆಯಾಗಿವೆ.
ಮೃತರನ್ನು ಚಿನ್ನದ ವ್ಯಾಪಾರಿಗಳೆಂದು ಪೊಲೀಸರು ಗುರುತಿಸಿದ್ದು, ಗುಂಟೂರು ಜಿಲ್ಲೆಯ ನರಸರಾವ್ಪೇಟ್ ಮೂಲದವರೆಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ: ವಿಜಯವಾಡ ದುರ್ಗಾ ದೇವಸ್ಥಾನದಲ್ಲಿ ಅಕ್ರಮ : 15 ಮಂದಿ ಉದ್ಯೋಗಿಗಳು ಅಮಾನತು
ಕೋಠಾ ರಾಮ್ಬಾಬು, ಆತನ ಸಹೋದರ ಕೋಠಾ ಶ್ರೀನಿವಾಸ್, ಆತನ ಸಂಬಂಧಿಯಾದ ಸಂತೋಷ್ ಮತ್ತು ಮತ್ತು ಚಾಲಕ ಸಂತೋಷ್ ಕಾರಿನಲ್ಲಿದ್ದರೆಂದು ತಿಳಿದು ಬಂದಿದೆ.
ಅಪಘಾತದ ನಂತರ ನಾಲ್ವರೂ ಕಾರಿನೊಳಗೆ ಸಿಕ್ಕಿಹಾಕಿಕೊಂಡಿದ್ದು, ಹೊರತೆಗೆಯುವ ವೇಳೆ ಕೋಠಾ ರಾಮ್ಬಾಬು ಸಾವನ್ನಪ್ಪಿದ್ದಾನೆ. ನಂತರ ಆಸ್ಪತ್ರೆಗೆ ಸಾಗಿಸುವ ವೇಳೆ ಕೋಠಾ ಶ್ರೀನಿವಾಸ್ ಸಾವನ್ನಪ್ಪಿದ್ದಾನೆ.
ಚಾಲಕ ಸಂತೋಷ್ ಮತ್ತು ಶ್ರೀನಿವಾಸ್ ಸಂಬಂಧಿ ಸಂತೋಷ್ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೆ ಕಾರಣವೇನೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.