ಬಾರಾಬಂಕಿ (ಉತ್ತರ ಪ್ರದೇಶ): ಇಲ್ಲಿನ ಫತೇಪುರದ ಸತ್ತಿ ಬಜಾರ್ ನಲ್ಲಿ ಸೋಮವಾರ ಮುಂಜಾನೆ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದಿದ್ದು, ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಅನೇಕ ಜನ ಅವಶೇಷಗಳ ಅಡಿ ಸಿಲುಕಿದ್ದಾರೆ. ಘಟನೆಯ ಮಾಹಿತಿ ಮಾಹಿತಿ ಪಡೆದ ಜಿಲ್ಲಾ ಅಧಿಕಾರಿಗಳು ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗಿವೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಪ್ರಾರಂಭಿಸಿವೆ ಎಂದು ಬಾರಾಬಂಕಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಮುಂಜಾನೆ 3 ಗಂಟೆ ಸುಮಾರಿಗೆ ಕಟ್ಟಡ ಕುಸಿದು ಬಿದ್ದಿದ್ದು, ಕತ್ತಲೆಯಲ್ಲಿ ತಕ್ಷಣ ರಕ್ಷಣಾ ಕಾರ್ಯ ನಡೆಸಲು ಅಧಿಕಾರಿಗಳಿಗೆ ಕಷ್ಟವಾಗಿತ್ತು.
"ಬಾರಾಬಂಕಿಯಲ್ಲಿ ಕಟ್ಟಡ ಕುಸಿದಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. 12 ಜನರನ್ನು ರಕ್ಷಿಸಿದ್ದೇವೆ. ಇನ್ನೂ ಮೂರರಿಂದ ನಾಲ್ಕು ಜನ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ನಮಗೆ ಮಾಹಿತಿ ಸಿಕ್ಕಿದೆ. ಇಬ್ಬರು ಸಾವನ್ನಪ್ಪಿದ್ದಾರೆ" ಎಂದು ಎಸ್ಪಿ ದಿನೇಶ್ ಕುಮಾರ್ ಸಿಂಗ್ ಹೇಳಿದರು. ಗಾಯಗೊಂಡ 12 ಮಂದಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಇತರ ಎಂಟು ಮಂದಿಯನ್ನು ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ (ಕೆಜಿಎಂಯು) ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಗಾಯಗೊಂಡು ಕೆಜಿಎಂಯುಗೆ ದಾಖಲಾದವರನ್ನು ಮೆಹಕ್ (12), ಶಕೀಲಾ (50), ಸುಲ್ತಾನ್ (24), ಕುಲ್ಸುಮ್ (47), ಝೈನಬ್ ಫಾತಿಮಾ (7), ಜಫರುಲ್ ಹಸನ್ (20), ಸಲ್ಮಾನ್ (26) ಮತ್ತು ಸಮೀರ್ (16) ಎಂದು ಗುರುತಿಸಲಾಗಿದೆ. ಮೃತರ ಕುಟುಂಬಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಘಟನಾ ಸ್ಥಳಕ್ಕೆ ತಲುಪಿ ತಕ್ಷಣ ಪರಿಹಾರ ಕಾರ್ಯಗಳನ್ನು ನಡೆಸುವಂತೆ ಸಿಎಂ ಆದಿತ್ಯನಾಥ್ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೃತರನ್ನು ಬಾರಾಬಂಕಿ ಜಿಲ್ಲೆಯ ಫತೇಪುರ್ ಪಟ್ಟಣದ ನಿವಾಸಿಗಳಾದ ರೋಶ್ನಿ ಬಾನು (22) ಮತ್ತು ಹಕೀಮುದ್ದೀನ್ (28) ಎಂದು ಗುರುತಿಸಲಾಗಿದೆ. ಕುಸಿದು ಬಿದ್ದ ಕಟ್ಟಡವು ಶಿಥಿಲವಾಗಿರಲಿಲ್ಲ ಮತ್ತು ಕೆಲವೇ ವರ್ಷಗಳ ಹಿಂದೆ ಅದನ್ನು ನಿರ್ಮಿಸಲಾಗಿತ್ತು ಎಂದು ಸ್ಥಳೀಯರ ಹೇಳಿಕೆಗಳನ್ನು ಉಲ್ಲೇಖಿಸಿ ಎಸ್ಪಿ ತಿಳಿಸಿದರು.
ಮಹಾರಾಷ್ಟ್ರದ ಭಿವಂಡಿಯಲ್ಲಿ ಕಟ್ಟಡ ಕುಸಿದು ಇಬ್ಬರ ಸಾವು: ಭಾನುವಾರ ಬೆಳಗಿನ ಜಾವ ಭಿವಂಡಿಯಲ್ಲಿ ಕಟ್ಟಡವೊಂದು ಕುಸಿದು ಇಬ್ಬರು ಸಾವಿಗೀಡಾದ ಘಟನೆ ನಡೆದಿದೆ. ಘಟನೆಯಲ್ಲಿ ಐದು ಜನ ಗಾಯಗೊಂಡಿದ್ದಾರೆ. ಥಾಣೆಯ ಭಿವಂಡಿಯ ದರ್ಗಾ ರಸ್ತೆಯ ಧೋಬಿ ತಲಾವ್ ಕ್ರೀಡಾಂಗಣದ ಬಳಿಯಿರುವ ಕಟ್ಟಡದ ನೆಲಮಹಡಿ ಮತ್ತು ಮೊದಲ ಮಹಡಿಗಳು ಕುಸಿದು ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ : ಎತ್ತರ ಹೆಚ್ಚಿಸಿಕೊಂಡು ಮತ್ತೆ ಸಾಫ್ಟ್ ಲ್ಯಾಂಡ್ ಆದ ವಿಕ್ರಮ್ ಲ್ಯಾಂಡರ್; ಇಸ್ರೊದ ಮತ್ತೊಂದು ಮಹತ್ಸಾಧನೆ