ರಾಂಚಿ(ಜಾರ್ಖಂಡ್): ರಾಜ್ಯದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿರುವ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇಬ್ಬರು ಐಸಿಸ್ ಉಗ್ರರನ್ನು ಬಂಧಿಸಿದೆ. ಖಚಿತ ಮಾಹಿತಿ ಮೇರೆಗೆ ಇಲ್ಲಿನ ಗೊಡ್ಡಾ ಮತ್ತು ಹಜಾರಿ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಬಂಧಿತರನ್ನು ಗೊಡ್ಡಾ ಜಿಲ್ಲೆಯ ಅಸನ್ಬಾನಿ ನಿವಾಸಿ ಮೊಹಮ್ಮದ್ ಆರಿಝ್ ಹುಸ್ಸೇನೈನ್ ಮತ್ತು ಹಜಾರಿಭಾಗ್ ಜಿಲ್ಲೆಯ ಪೆಲವಾಲ್ ನಿವಾಸಿ ನಸೀಮ್ ಎಂದು ಗುರುತಿಸಲಾಗಿದೆ.
ಮೊಹಮ್ಮದ್ ಆರಿಝ್ ಹುಸ್ಸೇನೈನ್ ಸಾಮಾಜಿಕ ಜಾಲತಾಣದಲ್ಲಿ ಯುವಕರನ್ನು ಸಂಪರ್ಕಿಸುತ್ತಿದ್ದನು. ಬಳಿಕ ಐಸಿಸ್ ವಿಚಾರಧಾರೆಗಳನ್ನು ಅವರ ತಲೆಗೆ ಬಿತ್ತುತ್ತಿದ್ದನು. ಜೊತೆಗೆ, ಬ್ರೈನ್ ವಾಶ್ ಮಾಡುತ್ತಿದ್ದನು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನೋರ್ವ ನಸೀಮ್ ಎಂಬಾತ, ಹುಸೇನೈನ್ ಜೊತೆ ಅನುಮಾನಾಸ್ಪದ ಸಂದೇಶಗಳನ್ನು ಹಂಚಿಕೊಂಡಿದ್ದಕ್ಕೆ ಬಂಧಿಸಲಾಗಿದೆ. ವಿಚಾರಣೆಯಲ್ಲಿ ಹುಸೇನೈನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿರುವ ವಿವಿಧ ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ನಸೀಮ್ ಹುಸೇನೈನ್ಗೆ ಜಿಹಾದ್ ಮತ್ತು ಐಸಿಸ್ ವಿಚಾರಧಾರೆಗಳನ್ನು ಹೊಂದಿರುವ ಎರಡು ಪುಸ್ತಕಗಳನ್ನು ಕಳುಹಿಸಿಕೊಟ್ಟಿದ್ದಾನೆ ಎಂದು ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಎಟಿಎಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರಿನಲ್ಲಿ ಐವರು ಉಗ್ರರ ಸೆರೆ: ಕಳೆದ ಜುಲೈ ತಿಂಗಳಲ್ಲಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಐವರು ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಜುಲೈ 20ರಂದು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು 4 ಜೀವಂತ ಗ್ರೆನೈಡ್‌ಗಳು ಪತ್ತೆ ಹಚ್ಚಿದ್ದರು. 7 ನಾಡ ಪಿಸ್ತೂಲ್, ವಾಕಿಟಾಕಿಗಳು, 12 ಮೊಬೈಲ್‌ಗಳು, ಡ್ರ್ಯಾಗರ್ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು.
ಐವರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಉಗ್ರರ ಬಂಧನ ಪ್ರಕರಣದ ತನಿಖೆಯು ಕಳೆದ ನವೆಂಬರ್ 2ರಂದು ಸಿಸಿಬಿಯಿಂದ ರಾಷ್ಟ್ರೀಯ ತನಿಖಾದಳಕ್ಕೆ (ಎನ್‌ಐಎ) ವರ್ಗಾವಣೆಗೊಂಡಿದೆ. ಇದರಿಂದ ಸಿಸಿಬಿ ಪೊಲೀಸರಿಂದ ಬಂಧಿತರಾಗಿದ್ದ ಉಗ್ರರಾದ ಆರ್.ಟಿ.ನಗರದ ಸುಲ್ತಾನ್‌ಪಾಳ್ಯ ನಿವಾಸಿ ಸೈಯದ್ ಸುಹೈಲ್ ಖಾನ್ (24), ಕೊಡಿಗೇಹಳ್ಳಿ ನಿವಾಸಿ ಮೊಹಮ್ಮದ್ ಉಮರ್ (29), ಭದ್ರಪ್ಪ ಲೇಔಟ್ ನಿವಾಸಿ ಜಾಹೀದ್ ತಬ್ರೇಜ್ (25), ಸೈಯ್ಯದ್ ಮುದಾಸಿರ್ ಪಾಷಾ (28) ಹಾಗೂ ಮೊಹಮ್ಮದ್ ಫೈಸಲ್‌ನನ್ನು (30) ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಧ್ವಂಸ, ದೇಶದ ವಿವಿಧೆಡೆ 26/11 ಮುಂಬೈ ಮಾದರಿ ವಿಧ್ವಂಸಕ ಕೃತ್ಯಕ್ಕೆ ಸಂಚು; ಶಂಕಿತ ಉಗ್ರರಿಂದ 'ಸ್ಫೋಟ'ಕ ಮಾಹಿತಿ