ಬನಿಹಾಲ್(ಜಮ್ಮು ಕಾಶ್ಮೀರ): ನಿಗೂಢ ಸ್ಫೋಟದ ಪರಿಣಾಮ ಓರ್ವ ಬಾಲಕ ಸೇರಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿರುವ ಘಟನೆ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಮೀಪದ ಬನಿಹಾಲ್ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಂಬಾನ್ ಜಿಲ್ಲೆಯಲ್ಲಿ ಬನಿಹಾಲ್ ನಗರವಿದ್ದು, ಇಲ್ಲಿನ ಎಂಜಿ ಕನ್ಸ್ಸ್ಟ್ರಕ್ಷನ್ ಸೈಟ್ನಲ್ಲಿ ಶುಕ್ರವಾರ ರಾತ್ರಿ 11.15ಕ್ಕೆ ಸುಮಾರಿಗೆ ನಿಗೂಢವಾಗಿ ಸ್ಫೋಟ ಸಂಭವಿಸಿದೆ. ಈ ವೇಳೆ ಸ್ಥಳದಲ್ಲಿದ್ದ ಉದಾಂಪುರದ ನಿವಾಸಿ ಗೋಪಾಲ್ ಶರ್ಮ (35) ಮತ್ತು ಮಂಗಿತ್ ಖಾರಿಯ ಎಂಬ 16 ವರ್ಷದ ಬಾಲಕ ಮೊಹಮದ್ ಅಖೀಬ್ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಸ್ಪೋಟದ ವಿಚಾರ ತಿಳಿಯುತ್ತಿದ್ದಂತೆ ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸಿದ್ದು, ಸಂಪೂರ್ಣ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆ ನಡೆಸಿವೆ ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.
ಎಂಜಿ ಕನ್ಸ್ಸ್ಟ್ರಕ್ಷನ್ ಕಚೇರಿ ಮತ್ತು ಕಾರ್ಮಿಕರಿಗೆ ನೀಡಲಾಗಿದ್ದ ವಸತಿ ಕಟ್ಟಡದ ಮಧ್ಯೆ ಸ್ಫೋಟ ಸಂಭವಿಸಿದೆ. ಜನರಲ್ಲಿ ಆತಂಕ ಸೃಷ್ಟಿಸುವ ಸಲುವಾಗಿ ಶಂಕಿತ ಉಗ್ರರು ಗ್ರೆನೇಡ್ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಬನಿಹಾಲ್ ಬೈಪಾಸ್ ಅನ್ನು ಎಂಜಿ ಕನ್ಸ್ಸ್ಟ್ರಕ್ಷನ್ ಕಂಪನಿ ನಿರ್ಮಾಣ ಮಾಡುತ್ತಿದ್ದು, ಈ ಬೈಪಾಸ್ ಜಮ್ಮು ಶ್ರೀನಗರ ಹೆದ್ದಾರಿಯ ಚತುಷ್ಪಥ ರಸ್ತೆಯ ಭಾಗವಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹೊಸ ಸಂಪುಟದ ನೂತನ ಸಚಿವರಿಗೆ ಖಾತೆಗಳ ಹಂಚಿಕೆ: ಯಾರ‍್ಯಾರಿಗೆ ಯಾವ ಖಾತೆ.. ಇಲ್ಲಿದೆ ಸಂಪೂರ್ಣ ವಿವರ