ಬೇವಾರ್(ರಾಜಸ್ಥಾನ): ಅಜ್ಮೇರ್ನ ಸರ್ಕಾರಿ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡ್ತಿದ್ದ ವೇಳೆ ಅಧಿಕ ತಾಪಮಾನದಿಂದಾಗಿ ಎರಡು ನವಜಾತ ಶಿಶುಗಳು ಸಾವನ್ನಪ್ಪಿವೆ. ಈ ಘಟನೆಗೆ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. 11 ದಿನಗಳ ಹಿಂದೆ ಜನಿಸಿದ್ದ ಓಂ ಪ್ರಕಾಶ್ ಅವರ ಹೆಣ್ಣುಮಗು ಹಾಗೂ ನಾಲ್ಕು ದಿನಗಳ ಹಿಂದೆ ಜನಿಸಿದ್ದ ಸುರೇಂದ್ರ ಅವರ ಗಂಡುಮಗು ಸಾವನ್ನಪ್ಪಿವೆ. ಶಿಶುಗಳ ತೂಕ ಕಡಿಮೆಯಿದ್ದ ಕಾರಣ ಐಸಿಯುನಲ್ಲಿ ಇಡಲಾಗಿತ್ತು. ಈ ವೇಳೆ ತಾಪಮಾನ ನಿಷ್ಕ್ರಿಯಗೊಂಡಿರುವ ಕಾರಣ, ದುರ್ಮರಣಕ್ಕೀಡಾಗಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪತಿಯಿಂದ ಅಸ್ವಾಭಾವಿಕ ಲೈಂಗಿಕ ಕ್ರಿಯೆ; ನೊಂದು ಪೊಲೀಸ್ ಠಾಣೆಗೆ ದೂರು ನೀಡಿದ ಪತ್ನಿ
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಜಿಲ್ಲಾ ವೈದ್ಯಾಧಿಕಾರಿ ಡಾ.ಕೆ.ಕೆ.ಸೋನಿ, ತಾಂತ್ರಿಕ ಕಾರಣಗಳಿಂದಾಗಿ ವಾರ್ಮರ್ ಅಧಿಕ ಬಿಸಿಯಾಗಿ ಈ ಅವಘಡ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖಾ ತಂಡ ರಚನೆ ಮಾಡಲಾಗಿದೆ ಎಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಪೋಷಕರು, ನಮ್ಮ ಮಕ್ಕಳು ಚೆನ್ನಾಗಿದ್ದವು. ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ 2021ರ ಮಾರ್ಚ್ ತಿಂಗಳಲ್ಲೂ ಇದೇ ಆಸ್ಪತ್ರೆಯಲ್ಲಿ ತಾಂತ್ರಿಕ ದೋಷ ಉಂಟಾಗಿ ವಾರ್ಡ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ 16 ನವಜಾತ ಶಿಶುಗಳ ರಕ್ಷಣೆ ಮಾಡಲಾಗಿತ್ತು. ಆದರೆ, ಇದೀಗ ಎರಡು ಕಂದಮ್ಮಗಳು ಬಲಿಯಾಗಿವೆ.