ಇಂಫಾಲ್/ನವದೆಹಲಿ : ಮಣಿಪುರದ ರಾಜಧಾನಿ ಇಂಫಾಲ್‌ನ ನ್ಯೂ ಚೆಕ್‌ಕಾನ್ ಪ್ರದೇಶದಲ್ಲಿ ಉದ್ರಿಕ್ತ ಗುಂಪೊಂದು ಎರಡು ಮನೆಗಳಿಗೆ ಬೆಂಕಿ ಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳು ಉದ್ರಿಕ್ತರತ್ತ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ. ಬುಧವಾರ ರಾತ್ರಿ ಇಂಫಾಲ್ ಪಶ್ಚಿಮ ಜಿಲ್ಲೆಯ ಲ್ಯಾಂಫೆಲ್ ಪ್ರದೇಶದಲ್ಲಿ ಮಣಿಪುರದ ಮಹಿಳಾ ಸಚಿವೆ ನೆಮ್ಚಾ ಕಿಪ್‌ಗೆನ್ ಅವರ ಅಧಿಕೃತ ಕ್ವಾರ್ಟರ್ಸ್‌ಗೆ ಕೆಲವು ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಅಗ್ನಿಶಾಮಕ ದಳ, ಸೇನಾ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಮಂಗಳವಾರ ರಾತ್ರಿ ಪೂರ್ವ ಇಂಫಾಲ್‌ನ ಖಮೆನ್ಲೋಕ್ ಪ್ರದೇಶದ ಪೂರ್ವ ಇಂಫಾಲ್‌ನ ಚರ್ಚ್‌ನೊಳಗೆ ಕೆಲವು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು ಮಹಿಳೆಯರೂ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದರು. 10 ಜನರು ಗಾಯಗೊಂಡಿದ್ದರು. ಈ ಮಧ್ಯೆ ಮಣಿಪುರದಲ್ಲಿ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
"ಮಣಿಪುರದ ಪರಿಸ್ಥಿತಿ ತುಂಬಾ ಆತಂಕಕಾರಿಯಾಗಿದೆ. ಜನರ ಸುರಕ್ಷತೆ ಮತ್ತು ಶಾಂತಿ ಮರುಸ್ಥಾಪನೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು ತೀವ್ರ ಬೇಸರ ತಂದಿದೆ" ಎಂದು ಗಾಂಧಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಮೇ 3 ರಂದು ಪ್ರಾರಂಭವಾದ ಘರ್ಷಣೆ: ಒಂದು ತಿಂಗಳ ಹಿಂದೆ ಈಶಾನ್ಯ ರಾಜ್ಯದಲ್ಲಿ ಭುಗಿಲೆದ್ದ ಮೈತೆಯ್ ಮತ್ತು ಕುಕಿ ಸಮುದಾಯದ ಜನರ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೆಯ್ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದ ನಂತರ ಮೇ 3 ರಂದು ಮೊದಲು ಘರ್ಷಣೆಗಳು ಪ್ರಾರಂಭವಾದವು. ರಾಜ್ಯದ ಜನಸಂಖ್ಯೆಯ ಶೇ 53ರಷ್ಟಿರುವ ಮೈತೆಯ್ಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದವರಾದ ನಾಗಾಗಳು, ಕುಕಿಗಳು ಶೇ 40 ರಷ್ಟಿದ್ದು ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.
10 ಲಕ್ಷ ರೂಪಾಯಿ ಪರಿಹಾರ : ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಮಣಿಪುರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಸದಸ್ಯರನ್ನು ಭೇಟಿ ಮಾಡಿ ಶಾಂತಿ ಪುನಃಸ್ಥಾಪಿಸಲು ಸರಣಿ ಕ್ರಮಗಳನ್ನು ಘೋಷಿಸಿದ್ದರು. ರಾಜ್ಯಪಾಲರ ನೇತೃತ್ವದಲ್ಲಿ ಶಾಂತಿ ಸಮಿತಿ ರಚಿಸುವುದಾಗಿ ತಿಳಿಸಿದ್ದರು. ಮೃತಪಟ್ಟವರ ಕುಟುಂಬಕ್ಕೆ ಕೇಂದ್ರ ಸರ್ಕಾರ ಈಗಾಗಲೇ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಇದನ್ನೂ ಓದಿ: ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ: ರಷ್ಯಾ- ಉಕ್ರೇನ್ ಯುದ್ಧಕ್ಕೆ ಹೋಲಿಸಿದ ಬಿಜೆಪಿ