ಕೋಟ(ರಾಜಸ್ಥಾನ): ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವೆಸಗಿರುವ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾಮುಕರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ರಾಜಸ್ಥಾನದ ಪೋಕ್ಸೊ ನ್ಯಾಯಾಲಯ ಈ ಮಹತ್ವದ ಆದೇಶ ಪ್ರಕಟಿಸಿದೆ. ರಾಜಸ್ಥಾನದ ಬುಂದಿ ಮತ್ತು ಝಲವರ್ ಜಿಲ್ಲೆಗಳಲ್ಲಿ ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ, ಮೇಲಿಂದ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ತಕ್ಕ ಶಿಕ್ಷೆ ವಿಧಿಸಲಾಗಿದೆ.
ಏನಿದು ಪ್ರಕರಣ?: 17 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಝಲವರ್ ಖಾನ್ಪುರ ಪ್ರದೇಶದ ನಿವಾಸಿ ಶಿಯಾರಾಮ್ ಮೀನಾ(26) ಜೀವಾವಧಿ ಶಿಕ್ಷೆಗೊಳಗಾಗಿದ್ದಾನೆ. ಜೊತೆಗೆ ಈತನಿಗೆ 2.15 ಲಕ್ಷ ರೂ ದಂಡ ವಿಧಿಸಿದೆ. ಕಳೆದ ಮೂರು ವರ್ಷಗಳ ಹಿಂದೆ 2019ರಲ್ಲಿ ಬುಂದಿಯ ಹಿಂದೋಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಜ್ಜಿಯ ಮನೆಯಿಂದ ಅಪ್ರಾಪ್ತೆಯನ್ನು ಅಪಹರಿಸಿದ್ದ ಕಾಮುಕ ಮೂರು ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದ ಎಂಬುದು ಸಾಬೀತಾಗಿದೆ.
ಇದನ್ನೂ ಓದಿ: 9 ವರ್ಷದ ಬಾಲಕಿ ಮೇಲೆ ವೃದ್ಧರಿಂದ ಅತ್ಯಾಚಾರ.. ಇಬ್ಬರ ಬಂಧನ, ಇನ್ನೊಬ್ಬನಿಗಾಗಿ ಹುಡುಕಾಟ
ಶೋಧಕಾರ್ಯ ನಡೆಸಿದ್ದ ಪೊಲೀಸರು 2019ರ ಆಗಸ್ಟ್ ತಿಂಗಳಲ್ಲಿ ಬಾಲಕಿಯನ್ನು ರಕ್ಷಣೆ ಮಾಡಿ, ಆರೋಪಿಯನ್ನು ಬಂಧಿಸಿದ್ದರು. ನಂತರ ಜಾಮೀನು ಮೇಲೆ ಆತ ಹೊರಗಡೆ ಬಂದಿದ್ದ. ಆದರೆ, ಇದೀಗ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕೋರ್ಟ್ನ ನ್ಯಾಯಾಧೀಶ ಸಲೀಂ ಬಾದರ್, ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿ ಆರೋಪಿ ವಿರುದ್ಧವಾಗಿ ತೀರ್ಪು ನೀಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಬಾಲಕಿ ಅಪಹರಣ, ಲೈಂಗಿಕ ಶೋಷಣೆ ಮತ್ತು ಅತ್ಯಾಚಾರ ಪ್ರಕರಣ ಸೇರಿಕೊಂಡಿವೆ.
ಬಾಲಕಿಗೆ ಪರಿಹಾರ ಮೊತ್ತ ನೀಡಲು ಸೂಚನೆ: ಜೀವಾವಧಿ ಶಿಕ್ಷೆಗೊಳಗಾಗಿರುವ ಆರೋಪಿಗೆ 2.15 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಮೊತ್ತವನ್ನ ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ಕೋರ್ಟ್ ಸೂಚಿಸಿದೆ.
2019ರ ಮತ್ತೊಂದು ಪ್ರಕರಣದಲ್ಲಿ 16 ವರ್ಷದ ಅಪ್ರಾಪ್ತೆಯನ್ನು ಅಪಹರಿಸಿ, ಅತ್ಯಾಚಾರವೆಸಗಿರುವ ಭಗವಾನ್ ಸಿಂಗ್(23)ಗೆ 20 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದ್ದು, 65 ಸಾವಿರ ರೂಪಾಯಿ ದಂಡ ಹಾಕಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ 2019ರ ಡಿಸೆಂಬರ್ ತಿಂಗಳಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಇದೀಗ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.