ಉತ್ತರ ಪ್ರದೇಶ : 2003 ರ ವಿಧಾನ ಪರಿಷತ್ ಚುನಾವಣೆ ಮರು ಮತ ಎಣಿಕೆ ವೇಳೆ ಬಸ್ತಿ ಜಿಲ್ಲೆಯಲ್ಲಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಮತಯಂತ್ರಗಳನ್ನು ಲೂಟಿ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಾಜಿ ಶಾಸಕರು ಮತ್ತು ಇತರೆ ಐವರನ್ನು ದೋಷಿಗಳು ಎಂದು ಆರೋಪಿಸಿ ಸಂಸದ/ಶಾಸಕ ನ್ಯಾಯಾಲಯವು ತೀರ್ಪು ನೀಡಿದೆ.
ಈ ಕುರಿತು ವಿಚಾರಣೆ ನಡೆಸಿದ ಬಸ್ತಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅರ್ಪಿತಾ ಯಾದವ್, ಕಾಂಗ್ರೆಸ್ (2012) ಮತ್ತು ಬಿಜೆಪಿ (2017) ಯಿಂದ ಎರಡು ಬಾರಿ ಶಾಸಕರಾಗಿದ್ದ ಸಂಜಯ್ ಜೈಸ್ವಾಲ್ ಮತ್ತು ಬಿಜೆಪಿಯ ಮಾಜಿ ಶಾಸಕ ಆದಿತ್ಯ ವಿಕ್ರಮ್ ಸಿಂಗ್ (2012) ಅವರನ್ನು ದೋಷಿ ಎಂದು ತೀರ್ಪು ನೀಡುವ ಮೂಲಕ ಪ್ರಮುಖ ಆರೋಪಿಗಳಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 2,000 ರೂ. ದಂಡ ವಿಧಿಸಿದ್ದಾರೆ.
ಇದನ್ನೂ ಓದಿ : ಮೋಸ್ಟ್ ವಾಂಟೆಡ್ ನಕ್ಸಲ್ವಾದಿ ದಿನೇಶ್ ಗೋಪೆ ನೇಪಾಳದಲ್ಲಿ ಬಂಧನ
ಬಸ್ತಿ ಜಿಲ್ಲಾ ಸರ್ಕಾರಿ ವಕೀಲರ ದೇವಾನಂದ್ ಸಿಂಗ್ ನೀಡಿದ ಮಾಹಿತಿ ಪ್ರಕಾರ, ಎಂಎಲ್ಸಿ ಚುನಾವಣೆ ಸಂದರ್ಭದಲ್ಲಿ ಮತಗಳ ಮರು ಎಣಿಕೆ ವಿಚಾರವಾಗಿ ವಿವಾದ ಉಂಟಾಗಿದ್ದು, ಆಗ ಅಭ್ಯರ್ಥಿ ಕಾಂಚನಾ ಸಿಂಗ್ ಅವರನ್ನು ಬೆಂಬಲಿಸುತ್ತಿದ್ದ ಕಾಂಗ್ರೆಸ್ ಮುಖಂಡ ಸಂಜಯ್ ಜೈಸ್ವಾಲ್ ಮತ್ತು ಆತನ ಆರು ಮಂದಿ ಸಹಚರರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಮತಯಂತ್ರಗಳನ್ನು ಲೂಟಿ ಮಾಡಿದ್ದರು. ಉದ್ಯಮಿ ಮನೀಶ್ ಜೈಸ್ವಾಲ್ ಅವರು ಕಾಂಚನಾ ಸಿಂಗ್ ವಿರುದ್ಧ ಚುನಾವಣೆಯಲ್ಲಿ ಗೆದ್ದ ನಂತರ ವಿವಾದ ಉದ್ಭವಿಸಿತ್ತು ಎಂದು ತಿಳಿಸಿದರು.