ಪ್ರತಾಪಗಢ(ರಾಜಸ್ಥಾನ) : ವಿಷಾಹಾರ ಸೇವಿಸಿ ಜಿಲ್ಲಾಸ್ಪತ್ರೆಗೆ ದಾಖಲಾದ ಒಂದೇ ಕುಟುಂಬದ 4 ಮಕ್ಕಳ ಪೈಕಿ ಇಬ್ಬರು ಸಾವಿಗೀಡಾಗಿದ್ದಾರೆ. ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಹಾಗೆ ಘಂಟಾಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಟುಂಬದ ಉಳಿದ ಮೂವರು ಸದಸ್ಯರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಂಟಾಳಿ ಪೊಲೀಸ್ ಠಾಣಾಧಿಕಾರಿ ಸೋಹನಲಾಲ್ ಈ ಬಗ್ಗೆ ಮಾಹಿತಿ ನೀಡಿ, ನಲಪಾಡ ಗ್ರಾಮ ಪಂಚಾಯಿತಿಯ ಮಾಂಡವ್ ಜೈಲು ಗ್ರಾಮದ ನಿವಾಸಿ ಭೂರಿ ಬಾಯಿ ಎಂಬುವವರ ಪುತ್ರಿ ಗುಡ್ಡಿ ಜೂನ್ 18 ರ ಸಂಜೆ ಅಡುಗೆ ಮಾಡಿ ಮನೆಯವರಿಗೆಲ್ಲಾ ಬಡಿಸಿದ್ದಾರೆ. ಸ್ವಲ್ಪ ಸಮಯದ ನಂತರ ಎಲ್ಲರ ಆರೋಗ್ಯವೂ ಹದಗೆಟ್ಟಿದೆ. ಎಲ್ಲರಿಗೂ ವಾಂತಿ-ಭೇದಿ ಆಗಿದೆ. ತಕ್ಷಣವೇ ಗ್ರಾಮಸ್ಥರ ನೆರವಿನಿಂದ ಎಲ್ಲರನ್ನು ಘಂಟಾಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು ಎಂದು ವಿವರಿಸಿದರು.
4 ಮಕ್ಕಳ ಸ್ಥಿತಿ ಚಿಂತಾಜನಕವಾದಾಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ 2 ವರ್ಷದ ಮಗಳು ಲಲಿತಾ ಮತ್ತು 6 ವರ್ಷದ ಮಗ ಛೋಟು ಸಾವಿಗೀಡಾಗಿದ್ದಾನೆ. ಇನ್ನೆರಡು ಮಕ್ಕಳು ಇನ್ನೂ ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಉಳಿದಂತೆ ಘಂಟಾಳಿ ಆರೋಗ್ಯ ಕೇಂದ್ರದಲ್ಲಿ ಕುಟುಂಬದ ಇತರ ಮೂವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.
ಕುಟುಂಬ ಸದಸ್ಯರು ಒಣಗಿಸಿಟ್ಟಿದ್ದ ಬೆಂಡೇಕಾಯಿ ಬೇಯಿಸಿ ತಿಂದಿದ್ದಾರೆ. ಇದರಿಂದ ಆಹಾರದಲ್ಲಿ ಸಮಸ್ಯೆ ಉಂಟಾಗಿರಬಹುದು. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಘಿದೆ. ಮೃತ ಮಕ್ಕಳಿಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಕಂಪ್ಲಿಯ ಗಂಡುಗಲಿ ಕುಮಾರರಾಮನ ಕೋಟೆಯಲ್ಲಿ 39 ಫಿರಂಗಿ ಗುಂಡುಗಳು ಪತ್ತೆ!