ಕಾಸರಗೋಡು(ಕೇರಳ): ಕೇರಳದ ಕೇವಲ ಎರಡೂವರೆ ವರ್ಷದ ಬಾಲಕಿ ಪಾರ್ವತಿ ತನ್ನ ಅದ್ಭುತ ಸ್ಮರಣ ಶಕ್ತಿಯಿಂದ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರು ದಾಖಲಿಸಿದ್ದಾಳೆ.
ಕಾಸರಗೋಡು ಜಿಲ್ಲೆಯ ಪರುವನಡ್ಕದ ನಿವಾಸಿ ಹರೀಶ್ ಮತ್ತು ಸುಕನ್ಯಾ ದಂಪತಿಯ ಪುತ್ರಿಗೆ ನೆನಪಿನ ಶಕ್ತಿ ಉಡುಗೊರೆಯಾಗಿ ಬಂದಿದೆ. ಮಲಯಾಳಂ, ತಮಿಳು ಮತ್ತು ತೆಲುಗು ಹಾಡುಗಳ ಕೇವಲ ಬಿಜಿಎಂ ಕೇಳಿಯೇ ಸುಮಾರು 30 ಹಾಡುಗಳನ್ನು ಈಕೆ ಗುರುತಿಸಬಲ್ಲಳು. ಅಷ್ಟೇ ಅಲ್ಲ, ದೇಶಗಳ ರಾಷ್ಟ್ರಧ್ವಜಗಳು, ರಾಜಧಾನಿಗಳು, ಮಂತ್ರಿಗಳ ಹೆಸರುಗಳೂ ಸಹ ಈಕೆಗೆ ಕರಗತ. ಜೊತೆಗೆ, ಸಾಮಾನ್ಯಜ್ಞಾನದ ಕುರಿತಾದ ಹಲವು ವಿಷಯಗಳಲ್ಲಿ ತಾನು ಸಂಪಾದಿಸಿರುವ ಜ್ಞಾನದಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾಳೆ.
ತಮ್ಮ ಮಗಳ ಕುರಿತು ಹರ್ಷ ವ್ಯಕ್ತಪಡಿಸಿರುವ ತಾಯಿ ಸುಕನ್ಯಾ, 'ಆಕೆ ಒಂದು ವರ್ಷದವಳಿದ್ದಾಗ ಮೊಬೈಲ್ ಅಥವಾ ಟಿವಿಯಲ್ಲಿ ಬರುವ ಹಾಡುಗಳನ್ನು ತುಂಬಾ ಆಸಕ್ತಿಯಿಂದ ಆಲಿಸುತ್ತಿದ್ದಳು. ಬಿಜಿಎಂ ಕೇಳುತ್ತಲೇ ಹಾಡು ಹಾಡಲು ಶುರು ಮಾಡುತ್ತಿದ್ದಳು ಎಂದು ಹೇಳಿದರು. ನಮ್ಮ ಮಗಳಿಗೆ ಪುಸ್ತಕ ಎಂದರೆ ಇಷ್ಟ. ನಮ್ಮ ಬಳಿ ಪುಸ್ತಕ ತರುತ್ತಿದ್ದಳು ಮತ್ತು ಚಿಕ್ಕ ವಯಸ್ಸಿನಿಂದಲೂ ಪುಸ್ತಕದಲ್ಲಿ ಏನೆಲ್ಲಾ ಇವೆ ಎಂದು ಹೇಳುವಂತೆ ಕೇಳುತ್ತಿದ್ದಳು. ಹೀಗಾಗಿಯೇ ನಾವು ಅವಳಿಗೆ ಹಲವು ವಿಷಯಗಳನ್ನು ಕಲಿಸಲು ಪ್ರಾರಂಭಿಸಿದೆವು' ಎಂದು ಹೇಳಿದರು.
'ಸಾಮಾನ್ಯಜ್ಞಾನದ ಪ್ರಶ್ನೆಗಳನ್ನು ಕಲಿಯುವ ಕುರಿತು ಆಸಕ್ತಿ ತೋರಿಸಿದಾಗ ನಾವು ಸಂತಸದಿಂದಲೇ ಆಕೆಗೆ ಹೇಳಿಕೊಡಲು ಆರಂಭಿಸಿದೆವು. ಹೀಗೆ ಹೇಳಿಕೊಟ್ಟಿದ್ದನ್ನೆಲ್ಲಾ ನೆನಪಿಟ್ಟುಕೊಂಡು ಪುನಃ ಹೇಳುತ್ತಾಳೆ, ಕಲಿಯುತ್ತಾಳೆ. ಹಾಗಾಗಿ ನಮ್ಮ ಮಗಳ ಈ ವಿಶಿಷ್ಟ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಕಂಡು ನಾವು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಅರ್ಜಿ ಸಲ್ಲಿಸಿದೆವು' ಎಂದು ಆಕೆಯ ತಂದೆ ಹರೀಶ್ ಹೇಳಿದರು.