ಹೈದರಾಬಾದ್(ತೆಲಂಗಾಣ): ಹೈದರಾಬಾದ್‌ನಲ್ಲಿ ದುರಂತ ಘಟನೆಯೊಂದು ನಡೆದಿರುವುದರ ಬಗ್ಗೆ ಬೆಳಕಿಗೆ ಬಂದಿದೆ. ಇಬ್ಬರು ದುಷ್ಕರ್ಮಿಗಳು ವಿವಾಹಿತ ಮಹಿಳೆಯನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಭಾನುವಾರ ಬೆಳಗ್ಗೆ ಈ ದುಷ್ಕೃತ್ಯ ನಡೆದಿದೆ.
ಪೊಲೀಸರು ಹಾಗೂ ಸಂತ್ರಸ್ತೆಯ ಕುಟುಂಬದವರು ನೀಡಿದ ವಿವರಗಳ ಪ್ರಕಾರ, ದಂಪತಿಗಳು ವಿಕಾರಾಬಾದ್ ಜಿಲ್ಲೆಯವರಾಗಿದ್ದು, ಗಂಡಿಪೇಟ್ ಮಂಡಲದ ಬಂಡ್ಲಗುಡಜಗೀರ್ ಪುರಸಭೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ ವಾಸಿಸುತ್ತಿದ್ದಾರೆ. ಗಂಡ ಕೂಲಿ ಕೆಲಸಕ್ಕೆ ತೆರಳುತ್ತಿದ್ದು, 29 ವರ್ಷದ ವಯಸ್ಸಿನ ಪತ್ನಿ ಗೇಟೆಡ್ ಕಮ್ಯುನಿಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡಿಕೊಂಡು ಸುಖವಾಗಿಯೇ ಇಬ್ಬರು ಜೀವನ ನಡೆಸುತ್ತಿದ್ದರು.
ವಿವಾಹಿತೆ ಮಹಿಳೆ ಶನಿವಾರ ರಾತ್ರಿ 7.30ರ ಸುಮಾರಿಗೆ ಇಂಡಸ್ ವ್ಯಾಲಿ ಕಾಲೋನಿಯಿಂದ ತನ್ನ ನಿವಾಸಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬಾಚುಪಲ್ಲಿಯ ನಿವಾಸಿ ಶುಭಂ ಶರ್ಮಾ ಮತ್ತು ಸುಮಿತ್ ಕುಮಾರ್ ಶರ್ಮಾ ಎಂಬ ಇಬ್ಬರು ಆರೋಪಿಗಳು ಕಾರಿನಲ್ಲಿ ಮೊದಲು ಆಕೆಯನ್ನು ಹಿಂಬಾಲಿಸಿದ್ದಾರೆ. ಬಳಿಕ ಯಾರೂ ಇಲ್ಲದ ಸಮಯವನ್ನು ಗಮನಿಸಿದ ಅವರಿಬ್ಬರು ಆಕೆಗೆ ಚಾಕು ತೋರಿಸಿ ಬೆದರಿಸಿದ್ದಾರೆ. ಬಳಿಕ ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಹತ್ತಿಸಿಕೊಂಡು ಅಲ್ಲಿಂದ ಕಿಸ್ಮತ್‌ಪುರ ಪ್ರದೇಶದ ನಿರ್ಜನ ಸ್ಥಳಕ್ಕೆ ಕರೆದೊಯ್ದು, ಇಬ್ಬರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಸಂತ್ರಸ್ತೆ ಬಳಿ ಇದ್ದ ಸುಮಾರು 25 ಗ್ರಾಂ ಚಿನ್ನದ ಸರ ಹಾಗೂ ಎರಡು ಮೊಬೈಲ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.
ಕೂಡಲೇ ಸಂತ್ರಸ್ತೆ ಸಮೀಪದಲ್ಲೇ ಇದ್ದ ನರಸಿಂಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಶೇಷ ತಂಡ ರಚಿಸಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅವರು ಎಲ್ಲಿಗೆ ಹೋಗಿದ್ದರು ಎಂಬುದು ಪತ್ತೆಯಾಯಿತು. ತಾಂತ್ರಿಕ ದಾಖಲೆ ಮತ್ತು ಇತರ ಸಾಕ್ಷ್ಯಗಳೊಂದಿಗೆ 12 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.
ಅವರಿಂದ ಕದ್ದ ವಸ್ತುವನ್ನು ವಸೂಲಿ ಮಾಡಲು ಸಾಧ್ಯವಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ಪುರಾವೆಗಳನ್ನು ಹುಡುಕುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಜಿಲ್ಲಾಧಿಕಾರಿಗಳ ಮುಂದೆ ಹಾಜರುಪಡಿಸಲಾಗಿದೆ. ಬಳಿಕ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳಾ ಆಯೋಗ ಆಕ್ರೋಶ: ವಿವಾಹಿತ ಮಹಿಳೆಯನ್ನು ಅಪಹರಿಸಿ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಗೆ ರಾಜ್ಯ ಮಹಿಳಾ ಆಯೋಗ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಹಿಳಾ ಆಯೋಗದ ಅಧ್ಯಕ್ಷೆ ಸುನಿತಾ ಲಕ್ಷ್ಮರೆಡ್ಡಿ ಮಾತನಾಡಿ, ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆ ವಿಧಿಸುವಂತೆ ಸೈಬರಾಬಾದ್ ಕಮಿಷನರ್ ಹಾಗೂ ರಂಗಾರೆಡ್ಡಿ ಜಿಲ್ಲಾಧಿಕಾರಿಗೆ ಆದೇಶಿಸಿದರು. ಈ ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.
ಓದಿ: ನಿಕ್ಕಿ ಯಾದವ್ ಹತ್ಯೆ ಪ್ರಕರಣ: ವಿವಾಹ ಸಾಕ್ಷಿ ಪಡೆಯಲು ಆರೋಪಿಯೊಂದಿಗೆ ಆರ್ಯ ಸಮಾಜ ಮಂದಿರಕ್ಕೆ ತೆರಳಿದ್ದ ಪೊಲೀಸರು