ನವದೆಹಲಿ: ಟಿವಿ ಮಾಧ್ಯಮವು ತನ್ನದೇ ಆದ ಸ್ವಯಂ ನಿಯಂತ್ರಕ ಒಕ್ಕೂಟ ಹೊಂದಿರಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ದೇಶದ ಸುದ್ದಿ ಮಾಧ್ಯಮಗಳಿಗೆ ನಿಯಂತ್ರಕ ಕಾರ್ಯವಿಧಾನ ಬಲಪಡಿಸುವ ಬಗ್ಗೆ ಸರ್ಕಾರ ಮುಂದಾಗಿದೆ. ದೂರದರ್ಶನಕ್ಕಾಗಿ ಹೊಸ ನೀತಿ ಸಂಹಿತೆ ಸಹ ಪರಿಗಣಿಸುತ್ತಿದೆ. ಸರ್ಕಾರ ಅದರ ಕಾರ್ಯವಿಧಾನದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಆದರೆ, ಕೆಲವು ನಿಯಂತ್ರಕ ವಿಷಯಗಳನ್ನು ಸಚಿವಾಲಯ ಪರಿಗಣಿಸುತ್ತಿದೆ ಎಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಂದು ಹೇಳಿದರು.
ಟಿವಿ ಮಾಧ್ಯಮ ಸ್ವಯಂ ನಿಯಂತ್ರಣಕ್ಕೆ ನ್ಯಾಯಮೂರ್ತಿ ಎ.ಕೆ.ಸಿಕ್ರಿ ನೇತೃತ್ವದ ಸಮಿತಿ ರಚಿಸಲಾಗಿದೆ. ಆದರೆ, ಅವುಗಳಲ್ಲಿ ಹಲವು ಸದಸ್ಯರು ಇರಲಿದ್ದಾರೆ. ಸುದ್ದಿ ವಾಹಿನಿ ಹೊಂದಿರುವ ನೀತಿ ಸಂಹಿತೆಯನ್ನು ಜವಾಬ್ದಾರಿಯುತವಾಗಿಸಲು ಸಲಹೆಗಳು ಬಂದಿವೆ ಎಂದರು.
ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಯಾವುದೇ ನಿಯಂತ್ರಕ ಸಂಸ್ಥೆ ಇಲ್ಲ ಅಥವಾ ಅವುಗಳಿಗೆ ಸ್ವಯಂ ನಿಯಂತ್ರಣವಿಲ್ಲ. ಈ ವೇದಿಕೆಯಲ್ಲಿ ಒಳ್ಳೆಯದರಿಂದ ಹಿಡಿದು ಕೆಟ್ಟದ್ದರವರೆಗೆ ನಾನಾ ವಿಷಯಗಳಿವೆ. ಜವಾಬ್ದಾರಿಯುತ ಸ್ವಾತಂತ್ರ್ಯದ ಉದಾಹರಣೆ ನೀಡಲು ಮಾಧ್ಯಮ ಭ್ರಾತೃತ್ವವು ಸ್ವತಃ ಮುಂದಾಗಬೇಕು ಎಂದು ಜಾವಡೇಕರ್ ಹೇಳಿದರು.
ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸ್ವಯಂ ನಿಯಂತ್ರಣದ ಮತ್ತೊಂದು ಕಾರ್ಯ ವಿಧಾನವಾಗಿದೆ. ಮುಖ್ಯಸ್ಥರನ್ನು ಸರ್ಕಾರ ನೇಮಕ ಮಾಡಿದರೂ ಅದರಲ್ಲಿ ಪತ್ರಿಕಾ ಮಾಲೀಕರು, ಸಂಪಾದಕರು, ಪತ್ರಕರ್ತರು, ಛಾಯಾಗ್ರಾಹಕರು ಮತ್ತು ಸಂಸದರು ಇದ್ದಾರೆ. ಆದರೆ ಪತ್ರಿಕಾ ಮಂಡಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಅದನ್ನೂ ಪರಿಗಣಿಸಲಾಗುತ್ತಿದೆ ಎಂದು ಜಾವಡೇಕರ್ ಭರವಸೆ ನೀಡಿದ್ದಾರೆ.