ಕೊಯಮತ್ತೂರು(ತಮಿಳುನಾಡು): ಸಾಮಾನ್ಯ ಕೌಟುಂಬಿಕ ಸಮಸ್ಯೆಯನ್ನು ವರದಕ್ಷಿಣೆ ಪ್ರಕರಣವನ್ನಾಗಿ ಪರಿವರ್ತಿಸಿ ವ್ಯಕ್ತಿಯೊಬ್ಬನಿಗೆ 5 ದಿನ ಜೈಲು ಶಿಕ್ಷೆ ವಿಧಿಸಿದ್ದ ಪೊಲೀಸ್ ಅಧಿಕಾರಿಗೆ ಮಾನವ ಹಕ್ಕುಗಳ ಆಯೋಗ ತಕ್ಕಶಾಸ್ತಿ ಮಾಡಿದೆ. ಸಂತ್ರಸ್ತ ವ್ಯಕ್ತಿಗೆ ಮಾನಸಿಕ ಯಾತನೆ ನೀಡಿದ ಕಾರಣಕ್ಕಾಗಿ ಅಧಿಕಾರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ ಪರಿಹಾರವಾಗಿ ನೀಡಲು ಸೂಚಿಸಿದೆ.
ತಮಿಳುನಾಡು ಕೊಯಮತ್ತೂರಿನ ವಿಜಯಕುಮಾರ್ ದೂರು ನೀಡಿದವರು. ದೂರುದಾರರು ಸಿರುಮುಗೈ ಎಸ್‌ಆರ್‌ಎಸ್ ಪಟ್ಟಣದ ನಿವಾಸಿಯಾಗಿದ್ದಾರೆ. ಇಂಜಿನಿಯರ್ ಆಗಿರುವ ವಿಜಯ್ಕುಮಾರ್ ವಿದೇಶದಲ್ಲೂ ಕೆಲಸ ಮಾಡಿದ್ದಾರೆ.
ವಿಜಯ್ಕುಮಾರ್ ಮತ್ತು ಪತ್ನಿ ಮಧ್ಯೆ ಸಹಜ ಕಲಹಗಳು ಉಂಟಾಗುತ್ತಿದ್ದವು. ಈ ಬಗ್ಗೆ ಅವರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ವಿಜಯ್ಕುಮಾರ್ ಅವರನ್ನು ಠಾಣೆಯ ಪೊಲೀಸ್ ಅಧಿಕಾರಿ ಮೀನಾಂಬಿಕಾಯಿ ಅವರು ವಿಚಾರಣೆ ನಡೆಸಿದ್ದಾರೆ. ಬಳಿಕ ಇದನ್ನು ವರದಕ್ಷಿಣೆ ಕಿರುಕುಳ ಎಂದು ಪರಿಗಣಿಸಿ ಎಫ್ಐಆರ್ ದಾಖಲಿಸಿ ಜೈಲಿಗಟ್ಟಿದ್ದಾರೆ.
5 ದಿನಗಳ ಶಿಕ್ಷೆಯ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪೊಲೀಸ್ ಅಧಿಕಾರಿಯ ನಿರ್ಧಾರದ ವಿರುದ್ಧ ಸಿಡಿದೆದ್ದ ವಿಜಯಕುಮಾರ್, ಕೌಟುಂಬಿಕ ಕಲಹವನ್ನು ವರದಕ್ಷಿಣೆ ಕಿರುಕುಳ ಕಾಯ್ದೆಯಡಿ ವಿಚಾರಣೆ ನಡೆಸಿ ತಮ್ಮನ್ನು ಹಿಂಸಿಸಲಾಗಿದೆ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗ ಪೊಲೀಸ್ ಅಧಿಕಾರಿಯು ತಪ್ಪು ಎಸಗಿರುವುದನ್ನು ಕಂಡುಕೊಂಡಿದೆ. ಸರಿಯಾಗಿ ವಿಚಾರಣೆ ನಡೆಸದೇ ದೂರುದಾರರಿಗೆ ಜೈಲು ಶಿಕ್ಷೆ ವಿಧಿಸಿದ್ದಕ್ಕಾಗಿ 1 ಲಕ್ಷ ದಂಡ ವಿಧಿಸಿದೆ. ಅದನ್ನು ಪರಿಹಾರವಾಗಿ ದೂರುದಾರರಿಗೆ ನೀಡಬೇಕು. 4 ವಾರದಲ್ಲಿ ಇದನ್ನು ಪಾವತಿಸಬೇಕು ಎಂದು ಆದೇಶಿಸಿದೆ.
ಓದಿ: ಪಿಎಂ ಮೋದಿ, ಸಿಎಂ ಯೋಗಿ ವಿರುದ್ಧ ಕಾಮೆಂಟ್: ಇನ್ಸ್ಪೆಕ್ಟರ್ಗೆ ಕಡ್ಡಾಯ ನಿವೃತ್ತಿ