ಜೆಮ್ಶೆಡ್ಪುರ(ಜಾರ್ಖಂಡ್): ದೇಶಾದ್ಯಂತ ಕೊರೊನಾ ಹಾವಳಿ ಕಾರಣ ವಿದ್ಯಾರ್ಥಿಗಳು ಶಾಲೆಗೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಆನ್ಲೈನ್ ಮೂಲಕ ಕ್ಲಾಸ್ಗಳಿಗೆ ಹಾಜರಾಗಬೇಕಾದ ಅನಿವಾರ್ಯತೆ ಇದೆ. ಆದರೆ, ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಮೊಬೈಲ್ ಇಲ್ಲದ ಕಾರಣ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದರ ಮಧ್ಯೆ ಕೆಲ ವಿದ್ಯಾರ್ಥಿಗಳು ಖುದ್ದಾಗಿ ಸಂಪಾದನೆ ಮಾಡಿ ಸ್ಮಾರ್ಟ್ಫೋನ್ ಖರೀದಿ ಮಾಡ್ತಿದ್ದಾರೆ. ಸದ್ಯ ಅಂತಹದೊಂದು ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
11 ವರ್ಷದ ತುಳಿಸಿ ಕುಮಾರಿ, ತಾನು ಮಾರಾಟ ಮಾಡಿರುವ 12 ಮಾವಿನ ಹಣ್ಣುಗಳಿಂದ 1.2 ಲಕ್ಷ ರೂ. ಗಳಿಕೆ ಮಾಡಿದ್ದಾಳೆ. ಪ್ರತಿ ಹಣ್ಣು 10 ಸಾವಿರ ರೂ.ಗೆ ಮಾರಿದ್ದು, ಇದರಿಂದ ಬಂದಿರುವ ಹಣದಿಂದಲೇ ಸ್ಮಾರ್ಟ್ ಫೋನ್ ಖರೀದಿ ಮಾಡಿದ್ದಾಳೆ.
5ನೇ ತರಗತಿ ವ್ಯಾಸಂಗ ಮಾಡುತ್ತಿರುವ ತುಳಿಸಿ ಕುಮಾರಿ ಕಳೆದ ಕೆಲ ದಿನಗಳಿಂದ ಮಾವಿನ ಹಣ್ಣು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಳು. ಆದರೆ, ಬಂದ ಹಣದಲ್ಲಿ ಸ್ಮಾರ್ಟ್ಫೋನ್ ಖರೀದಿ ಮಾಡಲು ಸಾಧ್ಯವಾಗಿರಲಿಲ್ಲ. ಇದರ ಮಧ್ಯೆ ಮುಂಬೈ ಮೂಲದ ಉದ್ಯಮಿಯೊಬ್ಬಳು ಬಾಲಕಿ ಬಳಿ ಒಂದು ಡಜನ್ ಮಾವಿನ ಹಣ್ಣು 1.2 ಲಕ್ಷ ರೂ.ಗೆ ಖರೀದಿ ಮಾಡಿದ್ದಾರೆ. ಜತೆಗೆ ಸ್ಮಾರ್ಟ್ಫೋನ್ ಹಾಗೂ ಶಿಕ್ಷಣ ಮುಂದುವರೆಸುವಂತೆ ತಿಳಿಸಿದ್ದಾರೆ.
ಇದನ್ನೂ ಓದಿರಿ: Good News: ಕೇಂದ್ರ ಸರ್ಕಾರಿ ನೌಕರರ ಕಾಯುವಿಕೆ ಅಂತ್ಯ: ಡಿಎ ಹೆಚ್ಚಿಸಿ ಆದೇಶ..
ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದಲೇ ರಸ್ತೆ ಪಕ್ಕದಲ್ಲಿ ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದ ಬಾಲಕಿ ಸ್ಮಾರ್ಟ್ಫೋನ್ ಖರೀದಿ ಮಾಡುವ ಬಯಕೆ ಇಟ್ಟುಕೊಂಡಿದ್ದಳು. ಆದರೆ, ಬರುವ ಹಣ ದಿನಸಿ ಖರೀದಿಗೆ ಮಾತ್ರ ಸರಿಯಾಗುತ್ತಿತ್ತು. ಹೀಗಾಗಿ ಆಕೆಯ ಕನಸು ಈಡೇರಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸಂತಸ ಹಂಚಿಕೊಂಡಿರುವ ತುಳಸಿ ಕುಮಾರಿ ತಾಯಿ, ಉದ್ಯಮಿಗೆ ನಾವು ಸದಾ ಋಣಿಯಾಗಿದ್ದು, ಅವರು ಮಾಡಿರುವ ಸಹಾಯ ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ. ಜತೆಗೆ ಮಗಳ ಶಿಕ್ಷಣ ಮುಂದುವರೆಸುವುದಾಗಿ ಹೇಳಿದ್ದಾರೆ.
ಸಹಾಯ ಮಾಡಿದ್ದು ಹೇಗೆ?
11 ವರ್ಷದ ಬಾಲಕಿ ರಸ್ತೆ ಪಕ್ಕದಲ್ಲಿ ಮಾವಿನ ಹಣ್ಣು ಮಾರಾಟ ಮಾಡ್ತಿದ್ದರ ಬಗ್ಗೆ ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದರ ಬಗ್ಗೆ ಉದ್ಯಮಿಗೆ ಗೊತ್ತಾಗುತ್ತಿದ್ದಂತೆ ಸಹಾಯಕ್ಕೆ ಮುಂದಾಗಿದ್ದು, ಪ್ರತಿ ಮಾವಿನ ಹಣ್ಣಿಗೆ 10 ಸಾವಿರ ರೂ. ನೀಡಿ ಖರೀದಿ ಮಾಡಿದ್ದಾರೆ.