ತಿರುಪತಿ(ಆಂಧ್ರಪ್ರದೇಶ): ಜನವರಿ 22ರಂದು ಅಯೋಧ್ಯೆಯ ಭವ್ಯ ರಾಮಮಂದಿರ ಉದ್ಘಾಟನೆಗೆ ಬರುವ ಭಕ್ತರಿಗಾಗಿ ಲಡ್ಡು ಪ್ರಸಾದ ತಯಾರಿಸಿ ಕೊಡುವುದಾಗಿ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಘೋಷಿಸಿದೆ. ಹನುಮಂತನ ಜನ್ಮಸ್ಥಳ ಎಂದೇ ಹೇಳಲಾಗುವ ತಿರುಮಲದಲ್ಲಿರುವ ಆಕಾಶಗಂಗಾ ಪ್ರದೇಶಕ್ಕೆ ಶ್ರೀನಿವಾಸನ ಅವತಾರವಾದ ಶ್ರೀರಾಮ ಬಂದಿದ್ದ ಎಂಬ ಪ್ರತೀತಿ ಇದೆ. ಹೀಗಾಗಿ ಅಂದಿನ ದಿವ್ಯ ಮಹೋತ್ಸವದ ಭಾಗವಾಗಲು ಟಿಟಿಡಿ ಬಯಸಿದ್ದು, ತಲಾ 25 ಗ್ರಾಂ ತೂಕದ ವಿಶೇಷ ಲಡ್ಡುಗಳನ್ನು ತಯಾರಿಸುತ್ತಿದೆ.
ಇದನ್ನು ಜಾಗತಿಕ ದತ್ತಿ ಅಭಿಯಾನದ ಭಾಗವಾಗಿ ಮಾಡಲಾಗುತ್ತದೆ. ತಿರುಮಲ ದೇವಸ್ಥಾನದ ಪಾಕಶಾಲೆಯಲ್ಲಿ ತಯಾರಿಸಲಾದ ಈ ವಿಶಿಷ್ಟ ಲಡ್ಡುಗಳು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಭಕ್ತರಿಗೆ ಸಂತೋಷ ತರುತ್ತದೆ ಎಂದು ಟಿಟಿಡಿ ಹೇಳಿದೆ.
ಭೂಮಿಪೂಜೆ ಪ್ರಸಾರ ವಿವಾದ: ಈ ಹಿಂದೆ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ಮಂದಿರಕ್ಕಾಗಿ ಭೂಮಿಪೂಜೆ ನಡೆದಾಗ, ಟಿಟಿಡಿ ತನ್ನ ವಾಹಿನಿಯಲ್ಲಿ ಪ್ರಸಾರ ಮಾಡಿರಲಿಲ್ಲ. ಇದು ಟೀಕೆ ಮತ್ತು ವಿವಾದಕ್ಕೆ ಕಾರಣವಾಗಿತ್ತು. ಆಕಾಶಗಂಗೆಯು ಹನುಮನ ಜನ್ಮಸ್ಥಳವಾಗಿ ಮಾರ್ಪಡಿಸಲು ಮುಂದಾಗಿರುವ ಟಿಟಿಡಿ, ರಾಮನ ಕಾರ್ಯಕ್ರಮವನ್ನು ನಿರ್ಲಕ್ಷಿಸಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಅಯೋಧ್ಯೆ ಕಾರ್ಯಕ್ರಮಕ್ಕೆ ಲಡ್ಡುಗಳನ್ನು ತಯಾರಿಸಿಕೊಡುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲು ಟಿಟಿಡಿ ಮುಂದಾಗಿದೆ.
ವಿಶ್ವದ ಗಮನ ಸೆಳೆದಿರುವ ಜನವರಿ 22 ರಂದು ರಾಮಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ದೇಶ, ವಿದೇಶದಿಂದ ಹಲವಾರು ಭಕ್ತರು ಅಯೋಧ್ಯೆಗೆ ಬರಲಿದ್ದಾರೆ. ಈವರೆಗೂ 7 ಸಾವಿರಕ್ಕೂ ಅಧಿಕ ಗಣ್ಯರಿಗೆ ಕಾರ್ಯಕ್ರಮಕ್ಕೆ ಆಗಮಿಸಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಹ್ವಾನಿಸಿದೆ.
ಭಕ್ತರಿಗಾಗಿ ಟೆಂಟ್ ಸಿಟಿ ನಿರ್ಮಾಣ: ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ವೈದಿಕ ಆಚರಣೆಗಳು ಒಂದು ವಾರದ ಮೊದಲು ಮುಂಚೆ ಅಂದರೆ ಜನವರಿ 16ರಿಂದಲೇ ಆರಂಭವಾಗಲಿವೆ. ಜನವರಿ 14ರಿಂದ ಜನವರಿ 22ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. 1008 ಹುಂಡಿ ಮಹಾಯಜ್ಞವೂ ನಡೆಯಲಿದ್ದು, ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಅಯೋಧ್ಯೆಯಲ್ಲಿ ಸಾವಿರಾರು ಭಕ್ತರು ಉಳಿದುಕೊಳ್ಳಲು ಟೆಂಟ್ ಸಿಟಿಗಳನ್ನು ನಿರ್ಮಿಸಲಾಗುತ್ತಿದೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಪ್ರಕಾರ, 10ರಿಂದ 15 ಸಾವಿರ ಭಕ್ತರಿಗೆ ವ್ಯವಸ್ಥೆ ಮಾಡಲಾಗುತ್ತಿದೆ.
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಯಂದು ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ