ತಿರುಮಲ(ಆಂಧ್ರಪ್ರದೇಶ): ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಆಂಜನೇಯನ ಜನ್ಮಸ್ಥಳದ ಬಗ್ಗೆ ಅಧಿಕೃತ ಮಾಹಿತಿ ರಿಲೀಸ್ ಮಾಡಿದ್ದು, ಆಕಾಶ ಗಂಗಾ ಬಳಿಯ ಏಳು ಬೆಟ್ಟಗಳಲ್ಲಿ ಒಂದಾದ ಅಂಜನಾದ್ರಿ ಬೆಟ್ಟದಲ್ಲಿ ಜನ್ಮಸ್ಥಳ ಎಂದು ಹೇಳಿಕೊಂಡಿದೆ. ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಆಚಾರ್ಯ ಮುರುಳೀಧರ ಶರ್ಮಾ ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದ್ದಾರೆ.
ಹನುಮನ ಜನ್ಮಸ್ಥಳ ದೃಢೀಕರಿಸಲು ಟಿಟಿಡಿ ಒಂದು ಸಮಿತಿ ರಚನೆ ಮಾಡಿತು. ಸಮಿತಿಯ ವಿದ್ವಾಂಸಕರು ಹಲವಾರು ಸಲ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಆಂಜನೇಯ ಅಲ್ಲಿಯೇ ಜನಿಸಿದ್ದಾನೆ ಎಂಬುದನ್ನ ಸಾಬೀತುಪಡಿಸಲು ಬಲವಾದ ಪುರಾವೆಗಳು ಸಿಕ್ಕಿವೆ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಆಚಾರ್ಯ ಮುರಳೀಧರ್ ಶರ್ಮಾ, ಹನುಮನ ಜನ್ಮಸ್ಥಳದ ಬಗ್ಗೆ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಬೌಗೋಳಿಕ, ಪೌರಾಣಿಕ ಮತ್ತು ಮೌಖಿಕ ಸಾಕ್ಷ್ಯ ಸಂಗ್ರಹಿಸಿದ್ದು, ವೆಂಕಟಾಚಲಂಗೆ ಅಂಜನಾದ್ರಿ ಸೇರಿದಂತೆ ಇನ್ನೂ 20 ಹೆಸರುಗಳಿವೆ. ದಂತಕಥೆಗಳಲ್ಲಿ ಹೇಳುವಂತೆ ಹನುಮಾನ್ ಜನಸಿದ್ದು ಅಂಜನಾದ್ರಿಯಲ್ಲಿ ಎಂದಿದ್ದಾರೆ.
ಬೆಳಗುತ್ತಿರುವ ಸೂರ್ಯನನ್ನ ನುಂಗಲು ಹನುಮ ವೆಂಕಟಗಿರಿಯಿಂದ ಹಾರಿದ್ದನು. 12 ಪ್ರಾಚೀನ ಗ್ರಂಥಗಳ ಪ್ರಕಾರ ಹನುಮಾನ್ ತಿರುಮಲ ಬೆಟ್ಟದಲ್ಲಿ ಜನಸಿರುವುದಾಗಿ ತಿಳಿಸಿದ್ದಾರೆ. ವೆಂಕಟಾಚಲಂ ಅನ್ನು ಅಂಜನಾದ್ರಿ ಎಂದು ವಿವರಿಸಲಾಗಿದೆ. ತಿರುಮಲಕ್ಕೆ ವೆಂಕಟಾಚಲ ಮಹಾತ್ಯಂ ಆಧಾರವಾಗಿದೆ ಎಂದು ಎರಡು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಹನುಮನ ಜನ್ಮಸ್ಥಳದ ಪುರಾವೆ ಸಂಗ್ರಹಿಸಲು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ವಿಶೇಷ ಸಮಿತಿ ರಚನೆ ಮಾಡಲಾಗಿದ್ದು, ಸಾಕಷ್ಟು ವಿವರ ಸಂಗ್ರಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.