ಹೈದರಾಬಾದ್: ಮಹಾರಾಷ್ಟ್ರ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ. ಮಹಾವಿಕಾಸ್ಅಘಾದಿಯ ಮಿತ್ರಪಕ್ಷಗಳಲ್ಲಿ ಕೆಲ ಗೊಂದಲ ಉಂಟಾಗಿರುವ ಬಗ್ಗೆ ಅನುಮಾನಗಳು ಮೂಡುತ್ತಿವೆ. ಇನ್ನು ಇದಕ್ಕೆ ಪುರಾವೆ ಎಂಬಂತೆ ಶಿವಸೇನೆಯ 55ನೇ ವರ್ಷಾಚರಣೆ ಸಂದರ್ಭದಲ್ಲಿ ಸಿಎಂ ಉದ್ಧವ್ ಠಾಕ್ರೆ ಕಾಂಗ್ರೆಸ್ ಬಗ್ಗೆ ನೀಡಿದ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ, ಈ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ನಾನಾ ಪಟೋಲೆ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣೆಯಲ್ಲಿ ಗೆಲ್ಲುವುದನ್ನು ಸಾರ್ವಜನಿಕರು ಮಾತ್ರ ನಿರ್ಧರಿಸುತ್ತಾರೆ ಎಂದು ನಾನಾ ಪಟೋಲೆ ಖಡಕ್ ಆಗಿ ಹೇಳಿದ್ದಾರೆ. ಶಿವಸೇನೆಯ ಈ ಭಾಷೆ ಸರಿಯಲ್ಲ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಹೆಚ್ಚು ಮಾತನಾಡಿದ್ದಾರೆ. ಈ ಮೂಲಕ ಅವರು ಮೈತ್ರಿಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ನ ಮತ್ತೊಬ್ಬ ಮುಖಂಡ ಸಂಜಯ್ ನಿರುಪಂ ಹೇಳಿದ್ದಾರೆ.
ಆದರೆ, ಈ ಬಗ್ಗೆ ಶಿವಸೇನೆ ಮುಖಂಡ ಸಂಜಯ್ ರಾವತ್ ಅವರನ್ನು ಕೇಳಿದಾಗ, ಪಕ್ಷದ 55 ನೇ ವರ್ಷಾಚರಣೆ ದಿನದಂದು ನಮ್ಮ ಪಕ್ಷದ ಮುಖ್ಯಸ್ಥರು ರಾಜ್ಯದಲ್ಲಿ ಯಾರು ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಮಾತನಾಡಿದ್ದಾರೋ ಅವರ ಬಗ್ಗೆ ಈ ಹೇಳಿಕೆ ನೀಡಿದ್ದಾರೆ. ಯಾರಾದರೂ ಏಕಾಂಗಿಯಾಗಿ ಹೋರಾಡಲು ಬಯಸಿದರೆ ಅವರು ಹೋರಾಡಲಿ. ಈ ವಿಷಯವು ಮಹಾರಾಷ್ಟ್ರದ ವಿಶ್ವಾಸಾರ್ಹತೆಯ ಬಗ್ಗೆಯೋ ಅಥವಾ ಶಿವಸೇನೆ ಅಸ್ತಿತ್ವದ ಬಗ್ಗೆಯೋ ಇದ್ದರೆ ನಾವು ಹೋರಾಡುತ್ತೇವೆ ಎಂದು ಹೇಳಿದರು.
ಇದನ್ನು ಓದಿ: ಚುನಾವಣೆಯನ್ನು ಸ್ವಾವಲಂಬಿಯಾಗಿ ಎದುರಿಸುವುದಾಗಿ ಹೇಳಿದ ಮಹಾರಾಷ್ಟ್ರ ಕಾಂಗ್ರೆಸ್ ವಿರುದ್ಧ ಠಾಕ್ರೆ ಗರಂ
ಮುಂದಿನ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲಿದೆ ಎಂದು ಕೆಲವು ದಿನಗಳ ಹಿಂದೆ ನಾನಾ ಪಟೋಲೆ ಅವರು ಹೇಳಿದ್ದರು. ಬಿಜೆಪಿಯಿಂದ 2014 ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಟೋಲೆ, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರನ್ನು ಸೋಲಿಸಿದ್ದರು. ಆದರೆ ನಂತರ ಅವರು ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ಯುಪಿಎ ಅಧ್ಯಕ್ಷ ಹುದ್ದೆಯ ಬಗ್ಗೆ ವಿವಾದ: 2020ರ ಡಿಸೆಂಬರ್‌ನಲ್ಲಿಯೂ ಕಾಂಗ್ರೆಸ್ ಮತ್ತು ಶಿವಸೇನೆ ಮುಖಾಮುಖಿಯಾಗಿದ್ದವು. ನಂತರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಯುಪಿಎ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ನೇಮಕ ಮಾಡಬೇಕು ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಪ್ರಕಟವಾಯಿತು. ಬಳಿಕ ಶಿವಸೇನೆ ಯುಪಿಎನಲ್ಲಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟವಾಗಿ ಹೇಳಿತ್ತು.
ಔರಂಗಾಬಾದ್ ಮರುನಾಮಕರಣಕ್ಕೆ ಕಾಂಗ್ರೆಸ್ ಆಕ್ಷೇಪ: ಮಹಾರಾಷ್ಟ್ರದಲ್ಲಿ ಔರಂಗಾಬಾದ್ ಹೆಸರನ್ನು ಬದಲಾಯಿಸಿದ್ದಕ್ಕಾಗಿ ಕಾಂಗ್ರೆಸ್-ಶಿವಸೇನೆ ಕೂಡ ಪರಸ್ಪರ ವಿರೋಧಿ ನಿಲುವು ತಳಿದಿದ್ದವು. ಶಿವಸೇನೆ ಅದಕ್ಕೆ ಸಾಂಭಾಜಿನಗರ ಎಂದು ಹೆಸರಿಸಲು ಬಯಸಿದ್ದರೂ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತು. ಔರಂಗಾಬಾದ್ ನಗರಕ್ಕೆ ಮೊಘಲ್ ದೊರೆ ಔರಂಗಜೇಬನ ಹೆಸರಿಡಲಾಗಿದೆ. ಆದರೆ ಈತ ಇತಿಹಾಸದಲ್ಲಿ ಮರಾಠ ಚಕ್ರವರ್ತಿ ಛತ್ರಪತಿ ಶಿವಾಜಿ ಮಹಾರಾಜರ ಮಗ ಸಾಂಭಾಜಿಯನ್ನು ಕೊಲ್ಲುತ್ತಾನೆ. ಹೀಗಾಗಿ ಆತನ ಹೆಸರಿಡಲು ಶಿವಸೇನೆ ವಿರೋಧಿಸಿತ್ತು.