ಮುಂಗೇರ್: ಜಮೀನು ವ್ಯಾಜ್ಯ ಸಂಬಂಧ ನಡೆದ ಹಿಂಸಾತ್ಮಕ ಘರ್ಷಣೆ ಮೂವರನ್ನು ಬಲಿ ಪಡೆದಿದ್ದು, ಮೂವರು ಪೊಲೀಸರು ಗಾಯಗೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಮುಂಗೇರ್‌ನ ಕರ್ಬಾಲಾ ನಿವಾಸಿ ಜೈ ರಾಮ್ ಸಾಹ್ ಅವರ ಪುತ್ರ ಚಂದನ್ ಕುಮಾರ್ ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ರಜೆ ಹಿನ್ನೆಲೆ ಮನೆಗೆ ಬಂದಿದ್ದರು. ಈ ವೇಳೆ ಜಮೀನು ವಿಚಾರಕ್ಕೆ ಗಲಾಟೆ ಮಾಡಿಕೊಂಡು ಸಾಗರ್ ಕುಮಾರ್ ಎಂಬಾತನನ್ನು ಗುಂಡಿಕ್ಕಿ ಒಬ್ಬರನ್ನು ಹತ್ಯೆ ಮಾಡಿದ್ದಾರೆ ಎಂದು ಮುಂಗರ್ ಪೊಲೀಸ್ ವರಿಷ್ಠಾಧಿಕಾರಿ ಮಾನವ್ ಜೀತ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.
ಸಾಗರ್ ಕುಮಾರ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಮಿಸಿದ ಗ್ರಾಮಸ್ಥರು ಚಂದನ್ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಚಂದನ್ ಮನೆಯಲ್ಲಿಲ್ಲದ ಕಾರಣ ಆತನ ತಂದೆ ಜೈ ರಾಮ್ ಸಾಹ್ ಹಾಗೂ ಚಂದನ್ ಸಹೋದರ ಕುಂದನ್ ಸಾಹ್ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಜೈ ರಾಮ್ ಸಾಹ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ತೀವ್ರವಾಗಿ ಗಾಯಗೊಂಡಿದ್ದ ಕುಂದನ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ.
ಈ ಪ್ರಕರಣ ಸಂಬಂಧ ಯೋಧ ಚಂದನ್ ಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.