ಕೊಲ್ಕತ್ತಾ: ಪ.ಬಂಗಾಳದಲ್ಲಿ ಕೋವಿಡ್ -19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇನ್ನುಳಿದ ಮೂರು ಹಂತಗಳ ಚುನಾವಣೆ ಸಂಬಂಧ ತೃಣಮೂಲ ಕಾಂಗ್ರೆಸ್ ಸಣ್ಣ ಮಟ್ಟದ ರಾಜಕೀಯ ಸಭೆಗಳನ್ನು ನಡೆಸಲಿದೆ. ಮತದಾನ ನಡೆಯಲಿರುವ ಜಿಲ್ಲೆಗಳ ರ್ಯಾಲಿಗಳಲ್ಲಿ ನಾನು ಕಿರು ಭಾಷಣ ಮಾಡಲಿದ್ದೇನೆ ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ಪ್ರಚಾರ ಭಾಷಣಗಳನ್ನು 20 ನಿಮಿಷ ಅಥವಾ 50 ನಿಮಿಷದಿಂದ ಒಂದು ಗಂಟೆಯ ಒಳಗೆ ಮುಗಿಸುತ್ತೇವೆ. ಇದರಿಂದ ಜನ ಹೆಚ್ಚು ಹೊತ್ತು ಒಂದೇಡೆ ಸೇರುವುದು ತಪ್ಪುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ದೆಹಲಿ ಬಿಜೆಪಿ ಸಚಿವೆ ಸಂತೋಷ್ ಗೋಯಲ್ ಕೊರೊನಾಗೆ ಬಲಿ
ಈ ಕುರಿತು ಟ್ವೀಟ್ ಮಾಡಿರುವ ಟಿಎಂಸಿಯ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಿಯೆನ್, ಮಮತಾ ಬ್ಯಾನರ್ಜಿ ಇನ್ನು ಮುಂದೆ ಕೊಲ್ಕತ್ತಾ ನಗರದಲ್ಲಿ ಯಾವುದೇ ಪ್ರಚಾರ ಸಭೆಗಳನ್ನು ನಡೆಸುವುದಿಲ್ಲ. ಏಪ್ರಿಲ್ 26 ರಂದು ಪ್ರಚಾರದ ಕೊನೆಯ ದಿನ ಒಂದು ಸಾಂಕೇತಿಕ ಸಭೆ ನಡೆಸಲಿದ್ದಾರೆ. ಅವರ ಮುಂದಿನ ಪ್ರಚಾರ ಭಾಷಣದ ಸಮಯವನ್ನು 30 ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಂಗಾಳ ಚುನಾವಣೆ
ಎಂಟು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 6,59,927 ಕ್ಕೆ ಏರಿದೆ. ರಾಜ್ಯದಲ್ಲಿ ಭಾನುವಾರ ಅತಿ ಹೆಚ್ಚು 8,419 ಹೊಸ ಪ್ರಕರಣಗಳು ವರದಿಯಾಗಿವೆ. ಭಾನುವಾರ ಒಂದೇ ದಿನ 28 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿಗೀಡದವರ ಸಂಖ್ಯೆ 10,568 ಆಗಿದೆ.