ನಾಸಿಕ್ (ಮಹಾರಾಷ್ಟ್ರ): ಸರಿಯಾದ ರಸ್ತೆ ಇಲ್ಲದ ಕಾರಣ ಮತ್ತು ಯಾವುದೇ ವಾಹನಗಳು ಬರಲು ಸಾಧ್ಯವಾಗದೇ ಗರ್ಭಿಣಿಯೊಬ್ಬರನ್ನು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಡೋಲಿಯಲ್ಲಿ 3 ಕಿಲೋಮೀಟರ್ ಹೊತ್ತುಕೊಂಡು ಬಂದ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ತ್ರಯಂಬಕೇಶ್ವರ ತಾಲೂಕಿನ ಹೆಡಪದ ಗ್ರಾಮದ ವೈಶಾಲಿ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಬೇಕಿತ್ತು. ಆದರೆ, ಗ್ರಾಮಕ್ಕೆ ಕಚ್ಚಾ ರಸ್ತೆ ಆಗಿರುವುದರಿಂದ ಮಳೆಯಿಂದ ಇಡೀ ರಸ್ತೆ ಕೆಸರು ಗದ್ದೆಯಂತಾಗಿದೆ. ಈ ರಸ್ತೆಯಲ್ಲಿ ಬೈಕ್ಗಳು ಸಂಚರಿಸಲು ಆಗದಷ್ಟು ದುಸ್ತರವಾಗಿದೆ.
ಡೋಲಿಯಲ್ಲಿ ಹೊತ್ತುಕೊಂಡು ಬಂದರು : ಹೀಗಾಗಿಯೇ ಅನಿವಾರ್ಯವಾಗಿ ಹಾಸಿಗೆಯಲ್ಲಿ ಡೋಲಿ ಮಾಡಿಕೊಂಡು ಹೊತ್ತುಕೊಂಡು ಮುಖ್ಯರಸ್ತೆಗೆ ಬಂದಿದ್ದಾರೆ. ನಂತರ ಮುಖ್ಯ ರಸ್ತೆಯಿಂದ ಎಂಟು ಕಿಲೋಮೀಟರ್ ದೂರವಿರುವ ಅಂಬೋಲಿಯ ಸರ್ಕಾರಿ ಆಸ್ಪತ್ರೆಗೆ ಗರ್ಭಿಣಿ ವೈಶಾಲಿ ಅವರನ್ನು ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ವೈಶಾಲಿ ಜನ್ಮ ನೀಡಿದ್ದಾರೆ.
ಹೆಡಪದ ಗ್ರಾಮವು ಬುಡಕಟ್ಟು ಜನರಿಂದಲೇ ಕೂಡಿದ್ದು, 300 ಜನ ವಾಸುತ್ತಿದ್ದಾರೆ. ಗ್ರಾಮಸ್ಥರು ಮೂಲ ಸೌಕರ್ಯಗಳಿಗಾಗಿ ಇನ್ನೂ ಪರದಾಡುತ್ತಿದ್ದಾರೆ. ಗ್ರಾಮದಲ್ಲಿ ವೈದ್ಯಕೀಯ ಸೌಲಭ್ಯ ಇಲ್ಲದ ಕಾರಣಕ್ಕೆ ಮೂರು ವರ್ಷಗಳ ಹಿಂದೆ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ 17 ವರ್ಷದ ಬಾಲಕಿ ಹಾವು ಕಡಿತದಿಂದ ಮೃತಪಟ್ಟಿದ್ದರು. ಗ್ರಾಮಕ್ಕೆ ರಸ್ತೆ ಮಂಜೂರಾಗಿದ್ದರೂ ಡಾಂಬರು ಹಾಕದೆ ನಿರ್ಲಕ್ಷ್ಯ ವಹಿಸಲಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಯಮುನಾ ನದಿಯಲ್ಲಿ ಮುಳುಗಿದ ದೋಣಿ.. 11 ಮೃತದೇಹ ಪತ್ತೆ, ಮುಂದುವರೆದ ರಕ್ಷಣಾ ಕಾರ್ಯಾಚರಣೆ