ತಿರುವನಂತಪುರ(ಕೇರಳ): ದೇವಾಲಯಗಳ ಆವರಣದಲ್ಲಿ ದೈಹಿಕ ತರಬೇತಿ ಅಥವಾ ಸಾಮೂಹಿಕ ಡ್ರಿಲ್ ನಡೆಸುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಶಾಖೆಗಳ ಕಾರ್ಯವನ್ನು ತಿರುವಾಂಕೂರು ದೇವಸ್ವಂ ಮಂಡಳಿ ನಿಷೇಧಿಸಿ, ಸುತ್ತೋಲೆ ಹೊರಡಿಸಿದೆ.
ತಿರುವಾಂಕೂರು ದೇವಸ್ವಂ ಮಂಡಳಿ ಆಯುಕ್ತರು ಈ ಸುತ್ತೋಲೆ ಹೊರಡಿಸಿದ್ದು, ಇದರಲ್ಲಿ ದೇವಾಲಯಗಳ ಅಂಗಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳು ತರಬೇತಿ, ಸಾಮೂಹಿಕ ವ್ಯಾಯಾಮ ನಡೆಸುವುದನ್ನು ನಿಷೇಧಿಸಿದೆ. ಜೊತೆಗೆ ಇದು ತಿರುವಾಂಕೂರು ದೇವಸ್ವಂ ಮಂಡಳಿ ವ್ಯಾಪ್ತಿಗೆ ಒಳಪಡುವ 1,240 ದೇವಾಲಯಗಳಿಗೆ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.
ಇನ್ನು ಒಂದು ವೇಳೆ ನಿಯಮ ಉಲ್ಲಂಘಿಸಿ ಯಾರದರೂ ಚಟುವಟಿಕೆಗಳನ್ನು ನಡೆಸಿದರೆ ಕೂಡಲೇ ಆಯುಕ್ತರ ಕಚೇರಿಗೆ ಮಾಹಿತಿ ನೀಡಬೇಕು. ಈ ಕುರಿತು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.