ತಿರುವಂತಪುರಂ(ಕೇರಳ): ಕೇರಳದಲ್ಲಿನ ತಿರುವಾಂಕೂರು ದೇವಸ್ವಂ ಮಂಡಳಿಯ(ಟಿಡಿಬಿ) ಅಧೀನದಲ್ಲಿರುವ ದೇವಸ್ಥಾನಕ್ಕೆ ಇದೇ ಮೊದಲ ಸಲ ಪರಿಶಿಷ್ಟ ಪಂಗಡ(ಎಸ್ಟಿ) ಸಮುದಾಯದ ಅರ್ಚಕರೊಬ್ಬರು ನೇಮಕಗೊಂಡಿದ್ದು, ಈ ಮೂಲಕ ಕೇರಳದ ಇತಿಹಾಸದಲ್ಲಿ ಇಂತಹ ನಿರ್ಧಾರ ಕೈಗೊಂಡಿರುವುದು ಪ್ರಪ್ರಥಮ ಸಲ ಎಂಬ ದಾಖಲೆ ನಿರ್ಮಾಣವಾಗಿದೆ.
ದೇವಾಲಯದ ಅರ್ಚಕರಾಗಿ ಪರಿಶಿಷ್ಟ ಪಂಗಡದ ವ್ಯಕ್ತಿಯೊಬ್ಬರು ಇಂದು ನೇಮಕಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿ ಮಾಹಿತಿ ಹಂಚಿಕೊಂಡಿದೆ.
ಕೇರಳದ ಶಬರಿಮಲೈ ದೇವಸ್ಥಾನ ಸೇರಿದಂತೆ ಕೇರಳದ 1,200 ದೇವಸ್ಥಾನಗಳ ನಿರ್ವಹಣೆ ಟಿಡಿಬಿ ನೋಡಿಕೊಳ್ಳುತ್ತಿದ್ದು, ಇದೀಗ ಅರೆಕಾಲಿಕ ಅವಧಿಗಾಗಿ ಪರಿಶಿಷ್ಟ ಜಾತಿಗೆ ಸೇರಿದ 19 ಅರ್ಚಕರು ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಓರ್ವ ಅರ್ಚಕರು ನೇಮಕಗೊಂಡಿದ್ದಾರೆ.
ತಿರುವಾಂಕೂರು ದೇವಸ್ವಂ ಮಂಡಳಿ 2017ರಿಂದ ಅರೆಕಾಲಿಕ ಅರ್ಚಕರ ನೇಮಕ ನಿಮಯ ಜಾರಿಗೆ ತಂದಿತ್ತು. ಆದರೆ ಈ ವೇಳೆ ಯಾವುದೇ ಹುದ್ದೆಗಳನ್ನ ಎಸ್ಸಿ/ಎಸ್ಟಿ ಸಮುದಾಯದವರಿಗೆ ನೀಡಿರಲಿಲ್ಲ. ಇದೇ ಮೊದಲ ಸಲ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ 133 ಬ್ರಾಹ್ಮಣೇತರ ಅರ್ಚಕರು ದೇವಸ್ಥಾನಗಳಲ್ಲಿ ನೇಮಕಗೊಂಡಿದ್ದಾರೆ.