ನವದೆಹಲಿ: ಹಿಟ್ ಅಂಡ್ ರನ್ ಕೇಸ್ಗೆ ಅಧಿಕ ಜೈಲು ಶಿಕ್ಷೆ, ದಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ 2 ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರ ಕೊನೆಗೊಂಡಿದೆ. ನೂತನ ಭಾರತೀಯ ನ್ಯಾಯ ಸಂಹಿತೆಯಲ್ಲಿ ಪ್ರಕರಣಕ್ಕೆ ವಿಧಿಸಲಾಗಿರುವ ಶಿಕ್ಷೆಯನ್ನು ಮರುಪರಿಶೀಲಿಸಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದ್ದು, ಮಂಗಳವಾರ ರಾತ್ರಿ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.
ಹೊಸ ಕ್ರಿಮಿನಲ್ ಕೋಡ್‌ನ ವ್ಯಾಪ್ತಿಯಲ್ಲಿ ಬರುವ ಹಿಟ್-ಅಂಡ್-ರನ್ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿದ್ದರ ವಿರುದ್ಧ ಲಾರಿ ಒಕ್ಕೂಟ ಮುಷ್ಕರ ಹಮ್ಮಿಕೊಂಡಿತ್ತು. ಇದರಿಂದ ಉತ್ತರ, ಪಶ್ಚಿಮ ಭಾರತದಲ್ಲಿ ಪೆಟ್ರೋಲ್, ಅಡುಗೆ ಅನಿಲದ ಪೂರೈಕೆಗೆ ಹಾಹಾಕಾರ ಉಂಟಾಗಿತ್ತು. ಪರಿಸ್ಥಿತಿಯನ್ನು ಮನಗಂಡ ಸರ್ಕಾರ ಸಂಧಾನ ನಡೆಸಿದ್ದು, ಲಾರಿ ಮಾಲೀಕರ ಮುನಿಸು ಶಮನವಾಗಿದೆ.
ತಕರಾರಿಗೆ ಕಾರಣವೇನು?: ಕೇಂದ್ರ ಸರ್ಕಾರ ಇತ್ತೀಚೆಗೆ ಅಂಗೀಕರಿಸಿದ 'ಭಾರತೀಯ ನ್ಯಾಯ ಸಂಹಿತೆ'ಯಲ್ಲಿ ಹಿಟ್ ಅಂಡ್ ರನ್ ಅಪಘಾತ ಪ್ರಕರಗಳಿಗೆ 10 ವರ್ಷ ಜೈಲು ಶಿಕ್ಷೆ, 7 ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಇದು ಲಾರಿ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯದ ಕಾನೂನಿನ ಪ್ರಕಾರ, ಹಿಟ್ ಅಂಡ್ ರನ್ ಕೇಸ್ನ ಆರೋಪ ಸಾಬೀತಾದರೆ, ಅಪರಾಧಿಗೆ ಗರಿಷ್ಠ 2 ವರ್ಷ ಜೈಲು, 1 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಐಪಿಸಿ ನಿಯಮಗಳನ್ನು ಬದಲಿಸಿರುವ ಸರ್ಕಾರ ಭಾರತೀಯ ನ್ಯಾಯ ಸಂಹಿತೆಯಲ್ಲಿ ಶಿಕ್ಷೆ ಮತ್ತು ದಂಡದ ಪ್ರಮಾಣವನ್ನು ಹೆಚ್ಚಿಸಿದೆ. ಈ ಬದಲಾವಣೆ ಬೇಡ ಎಂಬುದು ಲಾರಿ ಚಾಲಕರ ಪ್ರಮುಖ ಬೇಡಿಕೆಯಾಗಿದೆ.
ಹೊಸ ಕಾಯ್ದೆ ಏಕೆ ಬೇಕು?: ದೇಶದಲ್ಲಿ ಹಿಟ್ ಅಂಡ್ ರನ್ ಕೇಸ್ಗಳು ವಿಪರೀತ ಹೆಚ್ಚಳವಾಗುತ್ತಿವೆ. ಸಂಭವಿಸಿದ ಒಟ್ಟು ರಸ್ತೆ ಅಪಘಾತಗಳ ಪೈಕಿ ಶೇಕಡಾ 30ರಷ್ಟು ಅಪಘಾತದ ಬಳಿಕ ಪರಾರಿಯಾದ ಪ್ರಕರಣಗಳಾಗಿವೆ. ಇಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣವೂ ತೀರಾ ಕಡಿಮೆಯಿದೆ. ಅಂದರೆ, ಒಟ್ಟು ಪ್ರಕರಣಗಳಲ್ಲಿ ಶೇಕಡಾ 10 ರಷ್ಟು ಮಾತ್ರ ಶಿಕ್ಷೆಗೆ ಒಳಗಾಗುತ್ತಾರೆ. ಇದನ್ನು ತಡೆಗಟ್ಟಲು ಸರ್ಕಾರ ಕಠಿಣ ನಿಯಮಗಳನ್ನು ಜಾರಿ ತರಲು ಮುಂದಾಗಿದೆ. ಇದು ಆಕ್ಷೇಪಕ್ಕೆ ಕಾರಣವಾಗಿದೆ.
ಲಾರಿ ಮಾಲೀಕರ ಒಕ್ಕೂಟವು ನಡೆಸಿದ ಮುಷ್ಕರದಿಂದ ಪೆಟ್ರೋಲ್, ಅಡುಗೆ ಅನಿಲ ಸರಬರಾಜು ನಿಂತು ಹೋಗಿ ಉತ್ತರ ಭಾರತದಲ್ಲಿ ತೀವ್ರ ಸಮಸ್ಯೆ ಸೃಷ್ಟಿಸಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಸರ್ಕಾರ ನಿಬಂಧನೆಗಳನ್ನು ಜಾರಿ ಮಾಡುವ ಮೊದಲು ಲಾರಿ ಮಾಲೀಕರ ಜೊತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದೆ.
ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ (ಎಐಎಂಟಿಸಿ) ಮಂಗಳವಾರ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರನ್ನು ಭೇಟಿ ಮಾಡಿ, ಹೊಸ ಕಾನೂನಿನ ನಿಬಂಧನೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ಇದನ್ನು ಜಾರಿಗೊಳಿಸುವ ಮೊದಲು ಸಚಿವಾಲಯವು ಎಐಎಂಟಿಸಿಯೊಂದಿಗೆ ಮಾತನಾಡಲಿದೆ ಎಂದು ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಮುಷ್ಕರವನ್ನು ಅಂತ್ಯಗೊಳಿಸಲಾಗಿದೆ ಎಂದು ಲಾರಿ ಮಾಲೀಕರ ಸಂಘ ತಿಳಿಸಿದೆ.
ಇದನ್ನೂ ಓದಿ: ಹೊಸ ಹಿಟ್ ಅಂಡ್ ರನ್ ಕಾನೂನು ವಿರೋಧಿಸಿ ಬೃಹತ್ ವಾಹನ ಚಾಲಕರ ಮುಷ್ಕರ: ಪೆಟ್ರೋಲ್, ಡೀಸೆಲ್ ಕೊರತೆ ಭೀತಿ