ಲೂಧಿಯಾನ (ಪಂಜಾಬ್): ಲೂಧಿಯಾನಾ ಫಿರೋಜ್ಪುರ ಮಾರ್ಗದ ಮುಲ್ಲಾಪುರ ದಖಾ ಬಳಿ ಗೂಡ್ಸ್ ರೈಲು ಹಳಿ ತಪ್ಪಿದ್ದು, ಭಾರಿ ಅಪಘಾತವೊಂದು ತಪ್ಪಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ರೈಲು ಬಹಳ ಹೊತ್ತು ಟ್ರ್ಯಾಕ್ನಲ್ಲೇ ಇದ್ದ ಕಾರಣ, ಈ ಮಾರ್ಗವಾಗಿ ಸಂಚರಿಸಬೇಕಿದ್ದ ಇತರ ಎಲ್ಲ ರೈಲುಗಳ ಕಾರ್ಯಾಚರಣೆಯನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ಆ ಮಾರ್ಗದಲ್ಲಿ ಸಾಗುವ ಇತರ ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯವಾಗಿತ್ತು. ರೈಲು ಹಳಿ ತಪ್ಪಿದ್ದರಿಂದಾಗಿ ಇತರ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದರಿಂದ ಜನರು ಪರದಾಡುವಂತಾಗಿತ್ತು.
ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ರೈಲಿನ ಚಕ್ರಗಳನ್ನು ಮತ್ತೆ ಹಳಿಗೆ ಜೋಡಿಸಿದ್ದಾರೆ. ಇದೀಗ ಮತ್ತೆ ಎಂದಿನಂತೆ ಅದೇ ಮಾರ್ಗದಲ್ಲಿ ರೈಲುಗಳು ಸಂಚಾರ ಪ್ರಾರಂಭಿಸಲಿವೆ. ದೀರ್ಘಕಾಲದ ಕಾರ್ಯಾಚರಣೆಯಿಂದಾಗಿ, ಆ ಮಾರ್ಗದಲ್ಲಿ ಸಂಚರಿಸಬೇಕಾಗಿದ್ದ ಹಲವು ರೈಲುಗಳು ತಡವಾಗಿ ಸಂಚರಿಸಿದವು. ಜೊತೆಗೆ ಕೆಲವು ರೈಲುಗಳ ವೇಳಾಪಟ್ಟಿಯನ್ನು ಮರುಹೊಂದಿಸಲಾಗಿದೆ. ಹಳಿ ತಪ್ಪಿದ ಗೂಡ್ಸ್ ರೈಲಿನ ಭೋಗಿಗಳನ್ನು ಮರು ಜೋಡಿಸಿ, ಹಳಿಯನ್ನು ಸುಗಮ ಕಾರ್ಯಾಚರಣೆಗೆ ಅಣಿಗೊಳಿಸಿದ ಬಳಿಕ ಆ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಪ್ರಯಾಣಿಕರ ಪರದಾಟ: ರೈಲುಗಳು ತಡವಾಗುತ್ತಿರುವುದರ ಬಗ್ಗೆ ಸರಿಯಾದ ಮಾಹಿತಿ ಸಿಗದೇ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು. ರೈಲುಗಳ ವಿಳಂಬದಿಂದಾಗಿ, ಪ್ರಯಾಣಿಕರು ರೈಲು ಸಿಬ್ಬಂದಿ ಮೇಲೆ ತೀವ್ರವಾಗಿ ಅಸಮಾಧಾನಗೊಂಡಿದ್ದರು. ರಾತ್ರಿಯ ಸಮಯವಾಗಿರುವುದರಿಂದ ಸಿಬ್ಬಂದಿ ರೈಲಿನ ಚಕ್ರಗಳನ್ನು ಹಳಿಗೆ ತರಲು ಸಾಕಷ್ಟು ಪ್ರಯತ್ನ ಪಡಬೇಕಾಯಿತು. ಪ್ರಯಾಣಿಕರು ಕೂಡ, ಸಾಕಷ್ಟು ಹೊತ್ತು ತಮ್ಮ ರೈಲಿಗಾಗಿ ಕಾದು ಕುಳಿತಕೊಳ್ಳಬೇಕಾಯಿತು.
ಅಧಿಕಾರಿಗಳಿಂದ ತನಿಖೆ: ರೈಲು ಹಳಿ ತಪ್ಪಿದ್ದಕ್ಕೆ ಕಾರಣ ತಿಳಿದು ಬಂದಿಲ್ಲ. ಯಾವುದಾದರೂ ಅಸಮರ್ಪಕ ಕಾರ್ಯದಿಂದ ರೈಲು ಹಳಿ ತಪ್ಪಿತೇ ಅಥವಾ ಹಳಿಯಲ್ಲಿ ಅಡಚಣೆಯುಂಟಾಗಿತ್ತಾ, ಈ ಬಗ್ಗೆ ಅಧಿಕಾರಿಗಳು, ಸಿಬ್ಬಂದಿ ಜೊತೆ ಸೇರಿ ತನಿಖೆ ಕೈಗೊಂಡಿದ್ದಾರೆ. ಗೂಡ್ಸ್ ಹಳಿ ತಪ್ಪಿ ಟ್ರ್ಯಾಕ್ನಲ್ಲೇ ಇದ್ದ ಕಾರಣ, ಅದನ್ನು ತೆರವುಗೊಳಿಸುವ ಸಲುವಾಗಿ ದೀರ್ಘ ಸಮಯದ ಕಾರ್ಯಾಚರಣೆ ಕೈಗೊಳ್ಳಬೇಕಾಯಿತು. ಇದರಿಂದಾಗಿ ಫಿರೋಜ್ಪುರಕ್ಕೆ ತೆರಳಬೇಕಿದ್ದ ರೈಲುಗಳು ಸಾಕಷ್ಟು ವಿಳಂಬವಾಗಿದ್ದವು. ನಿಲ್ದಾಣದಲ್ಲೇ ಕುಳಿತಿದ್ದ ಜನ ಬಹಳಷ್ಟು ಸಮಸ್ಯೆ ಅನುಭವಿಸುವಂತಾಯಿತು. ಕಾರ್ಯಾಚರಣೆ ವೇಳೆ ಹೆಚ್ಚಿನ ರೈಲುಗಳು ಧಂಡಾರಿ ನಿಲ್ದಾಣದ ಮೂಲಕ ಚಲಿಸುತ್ತಿದವು. ಕಾರ್ಯಾಚರಣೆ ಮುಗಿದ ಬಳಿಕ ಇಂದಿನಿಂದ ರೈಲುಗಳು ಲೂಧಿಯಾನ ರೈಲು ನಿಲ್ದಾಣದ ಮೂಲಕ ಸಾಗುತ್ತಿವೆ.
ಇದನ್ನೂ ಓದಿ : ಗ್ರೀನ್ ಲೈನ್‌ನಲ್ಲಿ ಹಳಿ ತಪ್ಪಿದ ನಮ್ಮ ಮೆಟ್ರೋ ರೀ ರೈಲ್; 12 ಗಂಟೆ ಕಾರ್ಯಾಚರಣೆಯ ಬಳಿಕ ತೆರವು