ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಂದು ಕೇಂದ್ರ ಸರ್ಕಾರದ ಆರ್ಥಿಕ ಮತ್ತು ಕಾರ್ಮಿಕ ನೀತಿಗಳನ್ನು ವಿರೋಧಿಸಿ ಹಲವಾರು ಕಾರ್ಮಿಕ ಸಂಘಗಳು ನಡೆಸುತ್ತಿರುವ ಮುಷ್ಕರ ಪಶ್ಚಿಮ ಬಂಗಾಳದ ಕೆಲವು ಭಾಗಗಳ ಜನ ಸಾಮಾನ್ಯರ ಮೇಲೆ ಭಾಗಶಃ ಪರಿಣಾಮ ಬೀರಿದೆ.
ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಬಂದ್ಗೆ ಕರೆ ನೀಡಿದ್ದು, ಸಿಐಟಿಯು ಮತ್ತು ಡಿವೈಎಫ್‌ಐನಂತಹ ಅಂಗಸಂಸ್ಥೆಗಳು ಬಂದ್ಗೆ ಬೆಂಬಲ ನೀಡಿವೆ. ಕೋಲ್ಕತಾ ಮತ್ತು ಸುತ್ತಮುತ್ತಲಿನ ಜಾಧವ್‌ಪುರ, ಗರಿಯಾ, ಕಮಲ್‌ಗಾಜಿ, ಲೇಕ್ ಟೌನ್ ಮತ್ತು ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಜಾಥಾ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜೊತೆಗೆ ಕೆಲವೆಡೆ ಪ್ರತಿಭಟನಾಕಾರರು ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಿದ್ದು, ರಾಷ್ಟ್ರೀಯ ಹೆದ್ದಾರಿ 34 ಅನ್ನು ನಿರ್ಬಂಧಿಸಲು ಯತ್ನಿಸಿದರು. ರಸ್ತೆ ಮಧ್ಯೆ ಟಯರ್ ಸುಟ್ಟು, ಬಸ್ನ ಗಾಜು ಒಡೆಯಲಾಗಿದೆ. ಇನ್ನು ಇಲ್ಲಿನ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಮುಂದುವರೆದಿದ್ದು, ಈವರೆಗೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ಈ ಮುಷ್ಕರದಲ್ಲಿ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್‌ಟಿಯುಸಿ), ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ಹಿಂದ್ ಮಜ್ದೂರ್ ಸಭಾ (ಎಚ್‌ಎಂಎಸ್), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಟಿಯುಸಿ), ಟ್ರೇಡ್ ಯೂನಿಯನ್ ಕೋ -ಆರ್ಡಿನೇಷನ್ ಸೆಂಟರ್ (ಟಿಯುಸಿಸಿ) ಮತ್ತು ಸ್ವ-ಉದ್ಯೋಗ ಮಹಿಳಾ ಸಂಘ ಭಾಗವಹಿಸಿವೆ.