ಹೈದರಾಬಾದ್ : ತೆಲಂಗಾಣ ರಾಜ್ಯ ಕಾಂಗ್ರೆಸ್ (ಟಿಪಿಸಿಸಿ) ಗೆ ಹೊಸ ಅಧ್ಯಕ್ಷರ ನೇಮಕವಾಗಿ ವಾರ ಕಳೆಯುವುದರೊಳಗೆ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಪಕ್ಷದ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ಕೌಶಿಕ್ ರೆಡ್ಡಿ ರಾಜೀನಾಮೆ ನೀಡಿದ್ದಾರೆ.
ನಿನ್ನೆ (ಸೋಮವಾರ) ಮಾಧ್ಯಮಗೋಷ್ಟಿ ಕರೆದು ಮಾತನಾಡಿದ ಕೌಶಿಕ್ ರೆಡ್ಡಿ, ಟಿಪಿಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರೇವಂತ್ ರೆಡ್ಡಿ, ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಮಾಣಿಕಂ ಟ್ಯಾಗೋರ್ ಅವರಿಗೆ 50 ಕೋಟಿ ರೂಪಾಯಿ ಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ, ತನ್ನ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಕಳಿಸಿರುವುದಾಗಿ ತಿಳಿಸಿದ್ದಾರೆ.
ಓದಿ : ಜನಸಂಖ್ಯೆ ನಿಯಂತ್ರಣ ಕಾನೂನಿಗೆ ಮುಸ್ಲಿಮರು ಹೆದರುವುದಿಲ್ಲ: ತಾರಿಕ್ ಅನ್ವರ್
ಈ ಬೆಳವಣಿಗೆಯಿಂದಾಗಿ ಹೊಸ ಹುರುಪಿನಲ್ಲಿ ಟಿಪಿಸಿಸಿ ಚುಕ್ಕಾಣಿ ಹಿಡಿದಿರುವ ರೇವಂತ್ ರೆಡ್ಡಿಯವರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಎರಡು ದಿನಗಳ ಹಿಂದೆಯಷ್ಟೇ ಅವರು ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದರು.
ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಹೆಚ್ಎಂಸಿ) ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ಟಿಪಿಸಿಸಿ ರಾಜ್ಯಾಧ್ಯಕ್ಷರಾಗಿದ್ದ ಎನ್. ಉತ್ತಮ್ ಕುಮಾರ್ ರೆಡ್ಡಿ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಇದಾದ, ಹಲವು ತಿಂಗಳ ಬಳಿಕ ಇತ್ತೀಚೆಗಷ್ಟೆ ರೇವಂತ್ ರೆಡ್ಡಿಯವರನ್ನು ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.