ಕುಲ್ಲು(ಹಿಮಾಚಲಪ್ರದೇಶ): ಜಿಲ್ಲೆಯಲ್ಲಿ ದುರಂತವೊಂದು ಸಂಭವಿಸಿದೆ. ಜಿಲ್ಲೆಯ ಉಪವಿಭಾಗದ ಬಂಜಾರ್‌ನಲ್ಲಿ ಭಾನುವಾರ ರಾತ್ರಿ 8:30 ರ ಸುಮಾರಿಗೆ ಟೆಂಪೋ ಟ್ರಾವೆಲರ್‌ವೊಂದು ಕಂದಕಕ್ಕೆ ಬಿದ್ದಿದ್ದು, ಏಳು ಜನರು ಮೃತಪಟ್ಟಿದ್ದಾರೆ.
ಸಂಭವಿಸಿದ ದುರಂತದಲ್ಲಿ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳು ಬಂಜಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ಗಾಯಾಳುಗಳನ್ನು ಕುಲ್ಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಮತ್ತು ಪೊಲೀಸ್ ತಂಡ ಜಂಟಿಯಾಗಿ ರಕ್ಷಣಾ ಕಾರ್ಯ ನಡೆಸಿತು.
ಪೊಲೀಸ್ ತಂಡವು ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದೆ. ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಬಂಜಾರಿನ ಘಿಯಾಗಿ ಜಲೋಡಾ ಬಳಿಯ ರಾಷ್ಟ್ರೀಯ ಹೆದ್ದಾರಿ-305 ರಲ್ಲಿ ಪ್ರವಾಸಿಗರ ಟೆಂಪೋ ಟ್ರಾವೆಲರ್ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಟೆಂಪೋ ಟ್ರಾವೆಲರ್‌ನಲ್ಲಿ 15 ಮಂದಿ ಪ್ರವಾಸಿಗರಿದ್ದರು ಎಂದು ಹೇಳಲಾಗುತ್ತಿದೆ. ಅಪಘಾತದ ಮಾಹಿತಿ ಬಂದ ತಕ್ಷಣ ಕೂಡಲೇ ಸ್ಥಳಕ್ಕೆ ತಲುಪಿ ರಕ್ಷಣಾ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ, ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲ. ಇವರೆಲ್ಲರೂ ವಾರಣಾಸಿಯ ಐಐಟಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಎಂದು ಹೇಳಲಾಗುತ್ತಿದೆ. ಮೃತರ ಮತ್ತು ಗಾಯಾಳುಗಳ ಗುರುತು ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸರು ನಡೆಸುತ್ತಿದ್ದಾರೆ. ಸ್ಥಳೀಯ ಜನರು ಸಹ ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡುವಲ್ಲಿ ನಿರತರಾಗಿದ್ದಾರೆ. ಪೊಲೀಸ್ ತಂಡವು ಸಹ ಪರಿಹಾರ ಕಾರ್ಯದಲ್ಲಿ ತೊಡಗಿದೆ ಎಂದು ಬಂಜಾರ್ ಶಾಸಕ ಸುರೇಂದ್ರ ಶೌರಿ ಹೇಳಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.